ADVERTISEMENT

ದೇಶದಲ್ಲಿ ಸಂವಿಧಾನ ಇರಬೇಕೇ ಅಥವಾ ಶರಿಯಾ ಇರಬೇಕೇ: ಸಿ.ಟಿ.ರವಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 16:04 IST
Last Updated 31 ಮಾರ್ಚ್ 2022, 16:04 IST
ಸಿ.ಟಿ.ರವಿ
ಸಿ.ಟಿ.ರವಿ   

ಬೆಂಗಳೂರು: ದೇಶದಲ್ಲಿ ಸಂವಿಧಾನ ಇರಬೇಕೇ ಅಥವಾ ಶರಿಯಾ ಇರಬೇಕೇ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್ ಕಾ ವಿಶ್ವಾಸ್‌ ಹೇಳಿಕೆಯ ಜೊತೆಗೆ ಯೋಜನೆಗಳನ್ನು ಜಾರಿಗೊಳಿಸಿದ ಮೋದಿ ಅವರು ಯಾರಿಗೂ ಅಭಿವೃದ್ಧಿ ಯೋಜನೆಯಲ್ಲಿ ದೋಖಾ ಮಾಡಿಲ್ಲ. ತಾರತಮ್ಯ ಮಾಡದೇ ಎಲ್ಲರಿಗೂ ಎಲ್ಲ ಸೌಲಭ್ಯಗಳನ್ನು ತಲುಪಿಸಿದ್ದಾರೆ. ಆದರೂ ಕೆಲವರು ಬಿಜೆಪಿಗೆ ಮತ ಹಾಕಿಲ್ಲ. ಅದಕ್ಕೆ ಮತೀಯ ಕಾರಣವಿದ್ದರೆ ತಪ್ಪಲ್ಲವೇ’ ಎಂದು ಪ್ರಶ್ನಿಸಿದರು.

‘ಸೆಕ್ಯುಲರ್‌ ಪಾಠ ಹಿಂದೂಗಳಿಗೆ ಮಾತ್ರ ಇರಬೇಕೆ’ ಎಂದು ಪ್ರಶ್ನಿಸಿದ ಅವರು, ‘ದಾರುಲ್‌ ಉಲೂಮ್, ದಾರುಲ್‌ ಇಸ್ಲಾಂ ಎಂದರೇನು ಎಂಬ ಚರ್ಚೆಯೂ ನಡೆಯಲಿ. ಆಗ ಕಮ್ಯುನಲ್ ಯಾರು, ಲಿಬರಲ್‌ ಯಾರೆಂಬುದು ಗೊತ್ತಾಗುತ್ತದೆ. ಹಲಾಲ್‌ ಮನೆಯಲ್ಲಿ ಇರಲಿ. ಮಾರ್ಕೆಟ್‌ನಲ್ಲಿ ಯಾಕೆ? ಮಾರ್ಕೆಟ್‌ನಲ್ಲಿ ಹಲಾಲ್‌ ಸೀಲ್ ಹಾಕಿ ಕಳುಹಿಸುವುದು ಮತೀಯವಾದದ ಪ್ರತೀಕ ಆಗುವುದಿಲ್ಲವೇ? ನಾವು ಗಾಳಿ ಮತ್ತು ಸಮಾಜವನ್ನು ವಿಭಜಿಸಲು ಆಗುವುದಿಲ್ಲ. ಹಲಾಲ್‌ನಂಥ ಕಾರಣಕ್ಕೆ ಸಮಾಜ ವಿಭಜನೆ ಆಗುವುದು ಸರಿಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಹಲಾಲ್‌ ಎಂದರೇನು? ಉತ್ಪನ್ನದ ಗುಣಮಟ್ಟದ ಪರೀಕ್ಷೆಗೆ ಸರ್ಟಿಫಿಕೇಟ್‌ ಇದಾಗಿದೆಯೇ? ಅದನ್ನು ಸರ್ಕಾರ ಕೊಡುತ್ತದೆಯೇ? ಜಾತ್ಯತೀತ ಎನ್ನಲು ಹಲಾಲ್‌ ಸರ್ಟಿಫಿಕೇಟ್‌ ಅನಿವಾರ್ಯವೇ ಎಂಬ ಪ್ರಶ್ನೆಗೂ ಸಮಾಜದಿಂದ ಉತ್ತರ ಬೇಕಿದೆ. ಹಲಾಲ್‌ ಕುರಿತ ಪ್ರಶ್ನೆಗಳಿಗೆ ಪ್ರಗತಿಪರರು, ಬುದ್ಧಿಜೀವಿಗಳು, ಮುಸ್ಲಿಂ ವಿದ್ವಾಂಸರು ಇದರ ಮೇಲೆ ಬೆಳಕು ಚೆಲ್ಲಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.