ಖರ್ಗೆ, RSS, CT ರವಿ
ಬೆಂಗಳೂರು: ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದು ವಿವಾದದ ಕಿಡಿ ಹೊತ್ತಿಸಿದೆ.
ಈ ಕುರಿತು ಬಿಜೆಪಿ ನಾಯಕ ಸಿ.ಟಿ ರವಿ, ಪ್ರಿಯಾಂಕ್ ಖರ್ಗೆ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಎಕ್ಸ್ ಪೋಸ್ಟ್ ಮಾಡಿರುವ ಅವರು, ಜೀವನ ಪೂರ್ತಿ ಹಾವಿನಂತೆ ಸಂಘದ ಮೇಲೆ ವಿಷಕಾರುತ್ತಾ ಇದ್ದ ಕೆಲವರು ಹೊಟ್ಟೆ ಒಳಗೆ ಹುಣ್ಣಾಗಿ ಇಹಲೋಕವನ್ನೇ ತ್ಯಜಿಸಿದ್ದಾರೆ. ತಮ್ಮದು ಯಾವ ಪಾಡೋ ಕಾದು ನೋಡೋಣ.. ಎಂದು ತಿವಿದಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ, ಯಾಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಹೇಳಿ..? ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ..? ನಾವು ರಾಷ್ಟ್ರದ ಘಟಕ ಎನ್ನುವುದನ್ನು ಅರ್ಥ ಮಾಡಿಸಿ ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವುದು ಸಂವಿಧಾನ ಬಾಹಿರವೇ..? ನೀವೇಕೆ ಕಣ್ಣಿದ್ದು ಕುರುಡರಾಗಿದ್ದೀರಿ, ಕಿವಿ ಇದ್ದು ಕಿವುಡರಾಗಿದ್ದೀರಿ..? ನಿಮ್ಮ ಕಲ್ಬುರ್ಗಿ ಜಿಲ್ಲೆಯಲ್ಲೇ ಮತಾಂಧರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಹಾಡು ಹಗಲೇ ತೊಡಗಿಸಿಕೊಳ್ಳುತ್ತಿರುವುದು ನಿಮಗೆ ಕಾಣುವುದಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ.
ಅಂದು ವಿಧಾನಸೌಧದ ಮೊಘಸಾಲೆಯಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ನಿಮಗೆ ಕೇಳಲಿಲ್ಲವೇ..? ಆವಾಗ ಪ್ರತಿಕ್ರಿಯಿಸಲು ನಿಮ್ಮ ಬಾಯಿ ಬಿದ್ದು ಹೋಗಿತ್ತೇ..? "ಭಾರತ್ ಮಾತಾ ಕೀ ಜೈ" ಎಂದರೆ ನಿಮ್ಮ ಪ್ರಕಾರ ಅದು ದೇಶದ್ರೋಹ. ಅದಕ್ಕಾಗಿ ಸಂಘದ ಶಾಖೆಗಳನ್ನು ನಿಷೇಧಿಸುವ ಮಾತನಾಡುತ್ತಿದ್ದೀರಿ. ಸಂಘದ ಶಾಖೆಗಳನ್ನು ನಿಷೇಧಿಸುತ್ತೇವೆಂಬ ತಿರುಕನ ಕನಸಿನಿಂದ ಮೊದಲು ಹೊರಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಘ ಇಂದು ಮನೆ ಮನೆಗಳನ್ನು ತಲುಪಿದೆ. ಹಲವು ತಲೆಮಾರುಗಳಿಂದ ಸಂಘವನ್ನು ಕಂಡರೆ ಉರಿದು ಬೀಳುತ್ತಿದ್ದ ನಿಮ್ಮವರೇ ತಮ್ಮ ಜೀವಮಾನದ ಕೊನೆಯಲ್ಲಿ ಬದಲಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಗಣರಾಜ್ಯದ ಪರೇಡ್ ನಲ್ಲೂ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ, ಇನ್ನೂ ಕೆಲವರು ಸಂಘ ದ್ವೇಷದಿಂದ ಹೊರಬಂದು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡಿ ಹೊಗಳಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಸೂಕ್ತ ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಅವರು ಟಿಪ್ಪಣಿ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.