ಬೆಂಗಳೂರು:‘ಜೀವನಪೂರ್ತಿ ಸಂಘದ ಮೇಲೆ ವಿಷ ಕಾರುತ್ತಾ ಇದ್ದ ಕೆಲವರು ಹೊಟ್ಟೆ ಒಳಗೆ ಹುಣ್ಣಾಗಿ ಇಹಲೋಕವನ್ನೇ ತ್ಯಜಿಸಿದ್ದಾರೆ. ತಮ್ಮದು ಯಾವ ಪಾಡೋ ಕಾದು ನೋಡೋಣ’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.
‘ಎಕ್ಸ್’ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ‘ಸಂಘದ ಶಾಖೆಗಳನ್ನು ನಿಷೇಧಿಸುತ್ತೇವೆಂಬ ತಿರುಕನ ಕನಸಿನಿಂದ ಮೊದಲು ಹೊರಬನ್ನಿ. ಸಂಘ ಇಂದು ಮನೆ ಮನೆಗಳನ್ನು ತಲುಪಿದೆ’ ಎಂದು ಹೇಳಿದ್ದಾರೆ.
‘ಹಲವು ತಲೆಮಾರುಗಳಿಂದ ಸಂಘವನ್ನು ಕಂಡರೆ ಉರಿದು ಬೀಳುತ್ತಿದ್ದ ನಿಮ್ಮವರೇ ತಮ್ಮ ಜೀವಮಾನದ ಕೊನೆಯಲ್ಲಿ ಬದಲಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಗಣರಾಜ್ಯೋತ್ಸವದ ಪರೇಡ್‌ನಲ್ಲೂ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ. ಇನ್ನೂ ಕೆಲವರು ಸಂಘದ ದ್ವೇಷದಿಂದ ಹೊರಬಂದು ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಹಾಡಿ ಹೊಗಳಿದ್ದಾರೆ’ ಎಂದು ರವಿ ಹೇಳಿದ್ದಾರೆ.
‘ನೀವೇಕೆ ಕಣ್ಣಿದ್ದು ಕುರುಡರಾಗಿದ್ದೀರಿ, ಕಿವಿ ಇದ್ದು ಕಿವುಡರಾಗಿದ್ದೀರಿ? ನಿಮ್ಮ ಕಲಬುರಗಿ ಜಿಲ್ಲೆಯಲ್ಲೇ ಮತಾಂಧರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಹಾಡಹಗಲೇ ತೊಡಗಿಸಿಕೊಳ್ಳುತ್ತಿರುವುದು ನಿಮಗೆ ಕಾಣುವುದಿಲ್ಲವೇ? ಅಂದು ವಿಧಾನಸೌಧದ ಮೊಗಸಾಲೆಯಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ನಿಮಗೆ ಕೇಳಿಸಲಿಲ್ಲವೇ? ಆವಾಗ ಪ್ರತಿಕ್ರಿಯಿಸಲು ನಿಮ್ಮ ಬಾಯಿ ಬಿದ್ದು ಹೋಗಿತ್ತೇ? ಭಾರತ್ ಮಾತಾ ಕೀ ಜೈ ಎಂದರೆ ನಿಮ್ಮ ಪ್ರಕಾರ ಅದು ದೇಶ ದ್ರೋಹ. ಅದಕ್ಕಾಗಿ ಸಂಘದ ಶಾಖೆಗಳನ್ನು ನಿಷೇಧಿಸುವ ಮಾತನಾಡುತ್ತೀರಿ’ ಎಂದಿದ್ದಾರೆ.
‘ಸಂಘದ ವಿರೋಧ ಅದು ರಾಷ್ಟ್ರದ ವಿರೋಧವೇ ಆಗುತ್ತದೆ. ಏಕೆಂದರೆ ಸಂಘ ರಾಷ್ಟ್ರೀಯ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಒಂದು ಸಂಘಟನೆ. ರಾಷ್ಟ್ರದ್ರೋಹಿಗಳು ಮತ್ತು ಸಂಘವನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಅದನ್ನು ವಿರೋಧಿಸುತ್ತಾರೆ’ ಎಂದು ಹೇಳಿದ್ದಾರೆ.
ಸಂಘ ದೇಶ ಭಕ್ತಿಯ ಸಂಸ್ಕಾರವನ್ನು ಕೊಡುತ್ತದೆ. ಹಿಂದೂಗಳನ್ನು ಸಂಘಟಿಸುವ ಕೆಲಸ ಮಾಡುತ್ತದೆ. ಸಂಘದ ಕುರಿತು ಪ್ರಿಯಾಂಕ್ ಖರ್ಗೆ ಅವರ ತಪ್ಪು ಕಲ್ಪನೆಯನ್ನು ದೂರ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ. ಅವರದು ಪೂರ್ವಗ್ರಹದ ದ್ವೇಷವಾದರೆ ಅದಕ್ಕೆ ಕಾಲವೇ ತಕ್ಕ ಉತ್ತರ ಕೊಡುತ್ತದೆ’ ಎಂದಿದ್ದಾರೆ.
ಹಿಂದೂ ಎಂಬುದಕ್ಕೂ ಸುಪ್ರೀಂಕೋರ್ಟ್ ಹೇಳಿರುವ ವ್ಯಾಖ್ಯಾನವನ್ನೇ ಆಧಾರವಾಗಿ ಸಂಘ ಬಳಕೆ ಮಾಡಿಕೊಳ್ಳುತ್ತದೆ. ಸಂಘ ಸ್ವದೇಶಿ ವಿಚಾರವನ್ನೇ ಮುಂದಿಟ್ಟಿದೆ. ಅಂದರೆ ಸ್ವಭಾಷೆ, ಸ್ವಭೂಷ, ಸ್ವಭೋಜನ ಮತ್ತು ಪರಿಸರ ಸಂರಕ್ಷಣೆ ಈ ವಿಚಾರವನ್ನು ದೇಶದ ಜನರ ಮುಂದೆ ಇಟ್ಟಿದೆ. ಇದರಲ್ಲಿ ಯಾವುದು ಇವರಿಗೆ ಅಪಥ್ಯವಾಗಿ ಕಾಣುತ್ತಿದೆ? ಮಾತೃಭಾಷೆಯಲ್ಲಿ ವ್ಯವಹರಿಸಿ ಎಂಬುದು ಅಪಥ್ಯವೇ? ಸ್ವದೇಶಿಗೆ ಒತ್ತು ನೀಡಬೇಕು ಎಂಬುದು ಅಪಥ್ಯವೇ ಎಂದು ಪ್ರಶ್ನಿಸಿದರು.
ಪ್ರತಿ ಗ್ರಾಮದಲ್ಲೂ ದೇವಾಲಯ ಸರ್ವರಿಗೂ ಮುಕ್ತವಾಗಬೇಕು. ಹಿಂದೂ ಸಮಾಜಕ್ಕೆ ಒಂದೇ ಸ್ಮಶಾನ ಇರಬೇಕು ಎಂದು ಆರ್‌ಎಸ್ಎಸ್ ಹೇಳಿದೆ. ಮತೀಯ ಓಲೈಕೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥಿಗಳಿಗೆ ಸಂಘ ಅರ್ಥವಾಗುವುದಕ್ಕೆ ಸಾಧ್ಯವಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.