ADVERTISEMENT

ಕುತೂಹಲಕ್ಕೆ ಕಾರಣವಾದ ‘ವಲಸಿಗ’ ಸಚಿವರ ನಡೆ!

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 18:31 IST
Last Updated 22 ಜುಲೈ 2021, 18:31 IST
ಕಾಂಗ್ರೆಸ್‌–ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಾಯಕರು
ಕಾಂಗ್ರೆಸ್‌–ಜೆಡಿಎಸ್‌ ತೊರೆದು ಬಿಜೆಪಿ ಸರ್ಕಾರದಲ್ಲಿ ಸಚಿವರಾದ ನಾಯಕರು    

ಬೆಂಗಳೂರು: ಎರಡು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್‌ನಿಂದ ವಲಸೆ ಬಂದು, ಬಿಜೆಪಿ ಸೇರಿ ಸಚಿವರಾಗಿರುವ ಏಳು ಜನರು, ಒಂದು
ಗುಂಪಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅರ್ಧ ತಾಸಿಗೂ ಹೆಚ್ಚಿನ ಹೊತ್ತು ಚರ್ಚೆ ನಡೆಸಿರುವುದು ಗುರುವಾರ ಸಂಜೆ ಹೊತ್ತಿಗೆ ಚರ್ಚೆಗೆ ಕಾರಣವಾಯಿತು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಯಡಿಯೂರಪ್ಪ ತಮ್ಮ ಕೊಠಡಿಗೆ ತೆರಳಿದರು.

ಸಚಿವರಾದ ಎಸ್.ಟಿ. ಸೋಮಶೇಖರ್‌, ಡಾ.ಕೆ. ಸುಧಾಕರ್‌, ಬಿ.ಸಿ. ಪಾಟೀಲ, ಬೈರತಿ ಬಸವರಾಜ, ಶಿವರಾಂ ಹೆಬ್ಬಾರ್‌, ಕೆ. ಗೋಪಾಲಯ್ಯ ಅವರು, ಎಲ್ಲರಿಗೂ ಕಾಣಿಸು ವಂತೆ ಪ್ರತಿಯೊಬ್ಬರೂ ತಮ್ಮ ಕೈಯಲ್ಲಿ ಪತ್ರವೊಂದನ್ನು ಹಿಡಿದು ಮುಖ್ಯಮಂತ್ರಿ ಕೊಠಡಿ ಕಡೆ ಒಂದು ಗುಂಪಾಗಿ ಧಾವಿಸಿದರು. ಸಚಿವ ಎಂ.ಟಿ.ಬಿ. ನಾಗರಾಜ್ ಕೂಡ ಸೇರಿಕೊಂಡರು.

ADVERTISEMENT

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕ ಅವರು ಕೊಠಡಿಯೊಳಗೆ ಸೇರಿಸಿಕೊಂಡು ಚರ್ಚೆ ನಡೆಸಿದರು. ‘ವಲಸಿಗ’ ಗುಂಪಿನ ಸಚಿವರ ರಾಜೀನಾಮೆ ಕೊಡಿಸುವ ಮೂಲಕ ಯಡಿಯೂರಪ್ಪ ಪ್ರತ್ಯೇಕ ತಂತ್ರ ಹೆಣೆಯಲು ಮುಂದಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದವು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಬಿ.ಸಿ. ಪಾಟೀಲ, ರಾಜೀನಾಮೆ ಕೊಡುವ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅಂತಹದೇನೂ ಇಲ್ಲ ಎಂದರು.

ಸಚಿವ ಶಿವರಾಂ ಹೆಬ್ಬಾರ್, ಇಲಾಖೆ ಮತ್ತು ಕ್ಷೇತ್ರದ ಕೆಲಸದ ಬಗ್ಗೆ ಚರ್ಚಿಸಲು ಹೋಗಿದ್ದೇವು ಎಂದು ಹೇಳಿಕೊಂಡರು.

‘ನಿಮ್ಮ ರಾಜೀನಾಮೆ ಪಡೆಯುವುದಾದರೆ ನಾನೂ ರಾಜೀನಾಮೆ ಕೊಡಲಿದ್ದೇನೆ ಎಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದೇನೆ‘ ಎಂದು ಎಂ.ಟಿ.ಬಿ. ನಾಗರಾಜ್ ಹೇಳಿದರು.

ಭವಿಷ್ಯದ ಬಗ್ಗೆ ಚರ್ಚೆ: ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸಿ, ಹೊಸ ಬರು ಮುಖ್ಯಮಂತ್ರಿಯಾದರೆ ಆ ಸರ್ಕಾರ ದಲ್ಲಿ ತಮ್ಮ ಭವಿಷ್ಯವೇನು ಎಂಬುದು ವಲಸಿಗ ಸಚಿವರ ಆತಂಕವಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ತಮ್ಮನ್ನು ಕೈಬಿಡದಂತೆ ಹಾಗೂ ಬಿಜೆಪಿ ಯಲ್ಲಿ ತಮಗೆ ಸೂಕ್ತ ಭವಿಷ್ಯ ಕಲ್ಪಿಸುವಂತೆ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡುವುದಷ್ಟೇ ಸಚಿವರ ಉದ್ದೇಶವಾಗಿತ್ತು ಎಂದು ಅವರ ಆಪ್ತ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.