ADVERTISEMENT

₹ 854 ಕೋಟಿ ಸೈಬರ್ ವಂಚನೆ: ಜಾಲ ಭೇದಿಸಿದ ಸಿಸಿಬಿ, ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2023, 11:12 IST
Last Updated 30 ಸೆಪ್ಟೆಂಬರ್ 2023, 11:12 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ದುಪ್ಪಟ್ಟು ಮಾಡುವ ಆಮಿಷವೊಡ್ಡಿ ₹ 854 ಕೋಟಿ ಸಂಗ್ರಹಿಸಿ ವಂಚಿಸಿದ್ದ ಜಾಲವನ್ನು ನಗರದ ಸಿಸಿಬಿ ಪೊಲೀಸರು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ.

‘ಫಣೀಂದ್ರ, ಮನೋಜ್, ಚಕ್ರಧರ್, ಶ್ರೀನಿವಾಸ್, ಸೋಮಶೇಖರ್ ಹಾಗೂ ವಸಂತ್ ಕುಮಾರ್ ಬಂಧಿತರು. ಇವರೆಲ್ಲರೂ ತಂಡ ಕಟ್ಟಿಕೊಂಡು ಹಲವು ವರ್ಷಗಳಿಂದ ಸೈಬರ್ ವಂಚನೆ ಮಾಡುತ್ತಿದ್ದರು. ಇವರಿಂದ ಸದ್ಯ ₹ 5 ಕೋಟಿ ನಗದು, 13 ಮೊಬೈಲ್‌ಗಳು, 7 ಲ್ಯಾಪ್‌ಟಾಪ್, ಪ್ರೀಂಟರ್, ಹಾರ್ಡ್‌ಡಿಸ್ಕ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಆರೋಪಿಗಳು ಇದುವರೆಗೂ ತಮ್ಮ 84 ಬ್ಯಾಂಕ್​ ಖಾತೆಗಳ ಮೂಲಕ ₹ 854 ಕೋಟಿ ವಹಿವಾಟು ನಡೆಸಿದ್ದಾರೆ. ಕರ್ನಾಟಕ ಹಾ್ಗೂ ಇತರೆ ರಾಜ್ಯಗಳ ಜನರನ್ನು ವಂಚಿಸಿರುವುದು ಗಮನಕ್ಕೆ ಬಂದಿದೆ’ ಎಂದರು.

‘ಹಣ ಹೂಡಿಕೆ ಮಾಡಿದರೆ, ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಲಾಭ ನೀಡುತ್ತೇವೆ’ ಎಂಬುದಾಗಿ ಆರೋಪಿಗಳು ಟೆಲಿಗ್ರಾಂ ಹಾಗೂ ವಾಟ್ಸ್‌ಆ್ಯಪ್‌ ಮೂಲಕ ಜಾಹೀರಾತು ನೀಡುತ್ತಿದ್ದರು. ಅದನ್ನು ನಂಬುತ್ತಿದ್ದ ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುತ್ತಿದ್ದರು.’

‘ನಗರದ ಸೈಬರ್‌ ಕ್ರೈಂ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದವು. ಇದರ ತನಿಖೆಗೆ ರಚಿಸಲಾಗಿದ್ದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ದಯಾನಂದ್ ತಿಳಿಸಿದರು.

5013 ಮಂದಿಗೆ ವಂಚನೆ: ‘ಬಂಧಿತ ಆರೋಪಿಗಳು ಇದುವರೆಗೂ 5013 ಮಂದಿಗೆ ವಂಚನೆ ಮಾಡಿರುವ ಮಾಹಿತಿ ಇದೆ. ಈ ಬಗ್ಗೆ ಎಲ್ಲ ರಾಜ್ಯಗಳ ಪೊಲೀಸ್‌ರಿಗೆ ಮಾಹಿತಿ ರವಾನಿಸಲಾಗಿದೆ’ ಎಂದು ಕಮಿಷನರ್ ದಯಾನಂದ್ ಹೇಳಿದರು.

‘ಅಂಡಮಾನ್ ಮತ್ತು ನಿಕೋಬಾರ್, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲೂ ಆರೋಪಿಗಳು ಕೃತ್ಯ ಎಸಗಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.