ADVERTISEMENT

ಮೊಸರು ಪ್ಯಾಕೆಟ್‌ ಮೇಲೆ ‘ದಹಿ’: ಆದೇಶ ವಾಪಸ್‌

ವ್ಯಾಪಕ ವಿರೋಧ: ಒತ್ತಡಕ್ಕೆ ಮಣಿದ ಎಫ್‌ಎಸ್‌ಎಸ್‌ಎಐ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 20:23 IST
Last Updated 30 ಮಾರ್ಚ್ 2023, 20:23 IST
   

ಬೆಂಗಳೂರು: ಮೊಸರು ಪ್ಯಾಕೆಟ್‌ ಮೇಲೆ ಹಿಂದಿ ಪದ ‘ದಹಿ’ ಎಂದು ನಮೂದಿಸುವಂತೆ ಹೊರಡಿಸಿದ್ದ ನಿರ್ದೇಶನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ತನ್ನ ಆದೇಶವನ್ನು ಗುರುವಾರ ವಾಪಸ್‌ ಪಡೆದಿದೆ.

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಎಫ್‌ಎಸ್‌ಎಸ್‌ಐ ನಿರ್ದೇಶನಕ್ಕೆ ವಿರೋಧ ವ್ಯಕ್ತವಾಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್‌ ಹಾಗೂ ಹಲವು ಕನ್ನಡ ಸಂಘಟನೆಗಳು ಆದೇಶ ವಾಪಸ್‌ ಪಡೆಯುವಂತೆ ಒತ್ತಾಯಿಸಿದ್ದವು.

ಎಫ್‌ಎಸ್‌ಎಸ್‌ಎಐ ಗುರುವಾರ ತನ್ನ ಆದೇಶವನ್ನು ಪರಿಷ್ಕರಿಸಿದ್ದು, ಪ್ರಾದೇಶಿಕ ಭಾಷೆಗಳನ್ನು ಪ್ಯಾಕೆಟ್‌ ಮೇಲೆ ಮುದ್ರಿಸಲು ಅವಕಾಶ ಕಲ್ಪಿಸಿದೆ. ಇಂಗ್ಲಿಷ್‌ ಜತೆ ಯಾವುದೇ ಪ್ರಾದೇಶಿಕ ಭಾಷೆಯನ್ನು ಬಳಸಬಹುದಾಗಿದೆ.

ADVERTISEMENT

ಉದಾಹರಣೆಗೆ ಇಂಗ್ಲಿಷ್‌ನಲ್ಲಿ curd ಜತೆ ಹಿಂದಿಯಲ್ಲಿ ದಹಿ, ಕನ್ನಡದಲ್ಲಿ ಮೊಸರು, ತಮಿಳಿನಲ್ಲಿ ಥೈರ್, ತೆಲುಗಿನಲ್ಲಿ ಪೆರುಗು ಎಂದು ಆವರಣದಲ್ಲಿ ಬಳಸಬಹುದಾಗಿದೆ.

ಕರ್ನಾಟಕ ಮತ್ತು ತಮಿಳುನಾಡಿನ ಹಾಲು ಒಕ್ಕೂಟಗಳಿಗೆ ಮಾರ್ಚ್‌ 10ರಂದು ನಿರ್ದೇಶನ ನೀಡಿದ್ದ ಎಫ್‌ಎಸ್‌ಎಸ್‌ಎಐ, ‘ದಹಿ’ ಎನ್ನುವ ಶಬ್ದವನ್ನೇ ಬಳಸಬೇಕು. ಆವರಣದಲ್ಲಿ ಮಾತ್ರ ಪ್ರಾದೇಶಿಕ ಭಾಷೆಯನ್ನು ನಮೂದಿಸುವಂತೆ ಸೂಚಿಸಿತ್ತು. ಉದಾಹರಣೆಗೆ ದಹಿ(ಮೊಸರು), ದಹಿ (ಪೆರುಗು) ಎಂದು ಆವರಣದಲ್ಲಿ ನಮೂದಿಸುವಂತೆ ಸೂಚಿಸಿತ್ತು.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್‌) ಹಾಗೂ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಹಾಲು ಒಕ್ಕೂಟಗಳಿಗೆ (ಬಮುಲ್‌) ಹಾಗೂ ತಮಿಳುನಾಡು ಸಹಕಾರ ಹಾಲು ಒಕ್ಕೂಟ ಮತ್ತು ಹ್ಯಾಟ್ಸನ್‌ ಆಗ್ರೊ ಪ್ರಾಡಕ್ಟ್ಸ್‌ ಸಂಸ್ಥೆಗಳಿಗೆ ಈ ಬಗ್ಗೆ ನಿರ್ದೇಶನವನ್ನು ನೀಡಲಾಗಿತ್ತು.

ತಮಿಳುನಾಡು ಸಹಕಾರ ಹಾಲು ಉತ್ಪಾದಕರ ಒಕ್ಕೂಟವು ಹಿಂದಿಯ ’ದಹಿ’ ಶಬ್ದ ಬಳಸಲು ನಿರಾಕರಿಸಿತ್ತು. ತಮಿಳು ಶಬ್ದ ‘ಥಯಿರ್‌’ ಮಾತ್ರ ಬಳಸುವುದಾಗಿ ತಿಳಿಸಿತ್ತು.

‘ಎಫ್‌ಎಸ್‌ಎಸ್‌ಎಐ ನಿರ್ದೇಶನ ಪಾಲಿಸುವುದಿಲ್ಲ. ನಮ್ಮ ರಾಜ್ಯಗಳಲ್ಲೇ ತಮಿಳು ಮತ್ತು ಕನ್ನಡವನ್ನು ನಿರ್ಲಕ್ಷಿಸಿ ಹಿಂದಿ ಬಳಸುವಂತೆ ಬಲವಂತದ ನಿರ್ದೇಶನ ನೀಡಲಾಗುತ್ತಿದೆ. ಇಂತಹ ನಿರ್ದೇಶನ ನೀಡಲು ಜವಾಬ್ದಾರಿಯಾಗಿರುವವರನ್ನು ಶಾಶ್ವತವಾಗಿಯೇ ದಕ್ಷಿಣದಿಂದ ನಿಷೇಧಿಸಲಾಗುವುದು’ ಎಂದು ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬುಧವಾರ ಕಟುವಾಗಿ ಟೀಕಿಸಿದ್ದರು.

‘ನಂದಿನಿ’ ಬಲಿ ಕೊಡುವ ಪ್ರಯತ್ನವೇ: ಕಾಂಗ್ರೆಸ್‌

‘ಕೆಎಂಎಫ್‌ ಮೇಲೆ ಅಮಿತ್ ಶಾ ಕಣ್ಣು ಬಿದ್ದಿದ್ದೇ ತಡ, ನೇಮಕಾತಿಯ ಹೊಣೆ ಯನ್ನು ಗುಜರಾತ್ ಮೂಲದ ಏಜೆನ್ಸಿಗೆ ವಹಿಸಲಾಯ್ತು. ಕೆಎಂಎಫ್‌ ನೇಮಕಾತಿ ಗಳಲ್ಲಿ ಅಕ್ರಮ ನಡೆಯಿತು. ಮೊಸರಿನ ಪ್ಯಾಕ್ ಮೇಲೆ ಹಿಂದಿಯ ‘ದಹಿ’ ಬರೆಯುವುದು ಕಡ್ಡಾಯವಾಯಿತು. ಇದೆಲ್ಲವೂ ಕರ್ನಾಟಕದ ‘ನಂದಿನಿ’ಯನ್ನು ಬಲಿ ಕೊಡಲು ಬಲಿಪೀಠದ ತಯಾರಿಯೇ’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.