ADVERTISEMENT

ಮರಕ್ಕೆ ಕಟ್ಟಿ ದಲಿತನ ಮೇಲೆ ಹಲ್ಲೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ದೇವನಹಳ್ಳಿ ತಾಲ್ಲೂಕಿನ ಚೀಮಾಚನಹಳ್ಳಿಯಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಅವರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು, ಸ್ಥಳೀಯರು ರಕ್ಷಿಸಿದರು
ದೇವನಹಳ್ಳಿ ತಾಲ್ಲೂಕಿನ ಚೀಮಾಚನಹಳ್ಳಿಯಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಅವರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು, ಸ್ಥಳೀಯರು ರಕ್ಷಿಸಿದರು   

ವಿಜಯಪುರ (ದೇವನಹಳ್ಳಿ): ಖಾಲಿ ನಿವೇಶನದ ಹಕ್ಕು ವಿಚಾರದಲ್ಲಿ ದಲಿತರು ಮತ್ತು ಸವರ್ಣೀಯರ ನಡುವೆ ನಡೆದಿರುವ ಘರ್ಷಣೆಯಲ್ಲಿ ದಲಿತ ಮುಖಂಡ ನಾರಾಯಣಸ್ವಾಮಿ ಎಂಬುವವರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿಯು ಚೀಮಾಚನಹಳ್ಳಿಯ ಅಂಗವಿಕಲರಾದ ಅನಸೂಯಮ್ಮ ಅವರಿಗೆ ನಿವೇಶನ ಮಂಜೂರು ಮಾಡಿತ್ತು. ಈ ನಿವೇಶನದಲ್ಲಿ ಸವರ್ಣೀಯರು ಅಕ್ರಮವಾಗಿ ಕಲ್ಲಿನ ತಡೆಗೋಡೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ದೂರು ನೀಡಲಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಿಶೀಲನೆ ನಡೆಸಿ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸವರ್ಣಿಯರಿಗೆ ಸೂಚನೆ ನೀಡಿ ಸಮಾಯವಕಾಶ ನೀಡಿದ್ದರು. ಅಲ್ಲಿವರೆಗೂ ತಡೆಗೋಡೆ ನಿರ್ಮಿಸದಂತೆ ಸೂಚಿಸಿದ್ದರು. ಯಾವುದನ್ನೂ ಲೆಕ್ಕಿಸದೆ ಸವರ್ಣೀಯರ ಗುಂಪು ಏಕಾಏಕಿ ದೌರ್ಜನ್ಯ ನಡೆಸಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ ಎಂದು ದಲಿತರು ದೂರಿದ್ದಾರೆ.

ADVERTISEMENT

‘ಶುಕ್ರವಾರ ಬೆಳಿಗ್ಗೆ ನನ್ನ ಸೋದರಿ ಅನಸೂಯಮ್ಮ ತಿಪ್ಪೆಗೆ ಕಸ ಹಾಕಲು ಹೋದಾಗ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಇದನ್ನು ತಡೆಯಲು ಹೋದಾಗ ಸವರ್ಣೀಯರಾದ ಕೃಷ್ಣಪ್ಪ, ನಾರಾಯಣಸ್ವಾಮಿ, ಚಂದ್ರ, ಭೈರೇಗೌಡ, ನಂಜಪ್ಪ ದೊಣ್ಣೆಗಳಿಂದ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಮರಕ್ಕೆ ಕಟ್ಟಿಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ಘರ್ಷಣೆಯಲ್ಲಿ ಅವರ ಪತ್ನಿ ಅಂಬಿಕಾ ಅವರ ಕೈಗೂ ಗಾಯವಾಗಿದೆ.

‘ದೌರ್ಜನ್ಯ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.