
ಬೆಂಗಳೂರು: ‘ಶಿಕ್ಷಣವೊಂದೇ ಶೋಷಿತರ ಭವಿಷ್ಯ ಮತ್ತು ಭರವಸೆ. ಹೀಗಾಗಿ, ಈ ಹಾದಿಯಲ್ಲಿ ದಲಿತ ಯುವಜನತೆ ಶ್ರಮವಹಿಸಬೇಕು’ ಎಂದು ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ ಡಿ. ಚಂದ್ರಶೇಖರಯ್ಯ ಅಭಿಪ್ರಾಯಪಟ್ಟರು.
ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನದ ಪ್ರಯುಕ್ತ ಶಾಲಾ ಶಿಕ್ಷಣ ಇಲಾಖೆಯ ಪದವಿಪೂರ್ವ ಕಾಲೇಜುಗಳ ಎಸ್‌ಸಿ, ಎಸ್‌ಟಿ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘವು ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ರೋಸ್ಟರ್ ಬಿಂದುಗಳನ್ನು ಸಮರ್ಪಕವಾಗಿ ಹಂಚದಿರುವ ಕಾರಣದಿಂದ ಮುಂಬಡ್ತಿಯಲ್ಲಿ ದಲಿತ ನೌಕರರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ದಲಿತ ಚುನಾಯಿತ ಪ್ರತಿನಿಧಿಗಳೂ ಸೇರಿದಂತೆ ಎಲ್ಲ ನೌಕರರೂ ಒಗ್ಗೂಡಬೇಕು’ ಎಂದರು.
‘ಅತಿ ಹೆಚ್ಚು ಮುಂಬಡ್ತಿಗಳು ನಡೆಯುವ ಶಿಕ್ಷಣ, ಗೃಹ ಮತ್ತು ಆರೋಗ್ಯ ಇಲಾಖೆಯಲ್ಲಿ ದಲಿತರಿಗೆ ಬಡ್ತಿ ನೀಡದೆ ವಂಚಿಸಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ವಂಚನೆ ನಡೆಯುತ್ತಲೇ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಜಂಟಿ ನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ಮಾತನಾಡಿ, ‘ಶೋಷಿತ ಸಮುದಾಯದ ಶಿಕ್ಷಕರು, ಉಪನ್ಯಾಸಕರು ತಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮೂಲಕ ಮುಂದಿನ ತಲೆಮಾರಿಗೆ ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸಬೇಕು’ ಎಂದು ಕಿವಿಮಾತು ಹೇಳಿದರು.
ಇಲಾಖೆಯ ಮತ್ತೊಬ್ಬ ಜಂಟಿ ನಿರ್ದೇಶಕ ಎನ್. ರಾಜು, ‘ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಮೀಸಲಾತಿ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬಹುದು’ ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಉತ್ತರ ಜಿಲ್ಲಾ ಉಪ ನಿರ್ದೇಶಕ ಪಾಲಾಕ್ಷ ಮಾತನಾಡಿ, ‘ಶೋಷಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದ ಯಾವುದೇ ಮಟ್ಟದಲ್ಲಿ ಹಿಂದುಳಿಯದೆ ಸಾಧನೆ ತೋರಿಸಬೇಕು’ ಎಂದರು.
ಉಪ ನಿರ್ದೇಶಕರಾದ ನರಸಿಂಹಮೂರ್ತಿ, ರಾಜೇಂದ್ರ, ಎಸ್‌ಸಿ, ಎಸ್‌ಟಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಜಯರಾಮ್, ಸಂಘದ ಜಿಲ್ಲಾ ಅಧ್ಯಕ್ಷರುಗಳಾದ ಶಿವಲಿಂಗಯ್ಯ, ಶಂಕರಯ್ಯ, ಶ್ರೀಕಂಠಯ್ಯ, ರಾಜು, ಸುರೇಶ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.