ADVERTISEMENT

ದಲಿತ ಉದ್ಯಮಿಗಳಿಗೆ ಸಹಾಯಧನ ಬಿಡುಗಡೆ ಮಾಡಿ: ಸಿ.ಜಿ. ಶ್ರೀನಿವಾಸನ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:21 IST
Last Updated 6 ಫೆಬ್ರುವರಿ 2026, 16:21 IST
ವಿಧಾನ ಸೌಧ
ವಿಧಾನ ಸೌಧ   

ಬೆಂಗಳೂರು: ದಲಿತ ಉದ್ಯಮಿಗಳ ಕೈಗಾರಿಕೆ ನಿವೇಶನ ಮತ್ತು ಶೆಡ್‌ಗಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ₹811 ಕೋಟಿ ಮೊತ್ತದ ಸಹಾಯಧನ ಬಾಕಿ ಉಳಿಸಿಕೊಂಡಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ದಲಿತ ಉದ್ದಿಮೆದಾರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್‌ ಕೋರಿದ್ದಾರೆ.

ದಲಿತ ಉದ್ಯಮಿಗಳ ಜತೆ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಿದ್ದ ಶ್ರೀನಿವಾಸನ್‌ ಈ ಕುರಿತು ಮನವಿ ಸಲ್ಲಿಸಿದ್ದಾರೆ.

‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಪರಿಶಿಷ್ಟ ಜಾತಿಯ 4,353 ಹಾಗೂ ಪರಿಶಿಷ್ಟ ಪಂಗಡಗಳ 1,159 ಮಂದಿಗೆ ನಿವೇಶನ ಮಂಜೂರು ಮಾಡಿದೆ. ನಿವೇಶನಗಳ ಖರೀದಿ ಮತ್ತು ಶೆಡ್‌ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆಯು ಸಹಾಯಧನ ಒದಗಿಸಬೇಕಿದ್ದು, 2016–17ನೇ ಸಾಲಿನಿಂದ ಬಾಕಿ ಇರಿಸಿಕೊಂಡಿದೆ’ ಎಂದು ವಿವರಿಸಿದ್ದಾರೆ.

‘ಬಾಕಿ ಅನುದಾನದಲ್ಲಿ ₹300 ಕೋಟಿಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು. 2026–27ನೇ ಸಾಲಿನ ಬಜೆಟ್‌ನಲ್ಲಿ ಸಹಾಯಧನ ಒದಗಿಸಲೆಂದೇ ₹650 ಕೋಟಿಯನ್ನು ಪ್ರತ್ಯೇಕವಾಗಿ ತೆಗೆದಿರಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.