ಬೆಂಗಳೂರು: ‘ದಲಿತ ಸಮುದಾಯದ ಸಬಲೀಕರಣಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಯಡಿ ತೆಗೆದಿರಿಸುವ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಒತ್ತಾಯಿಸಿದರು.
ಉಪ ಯೋಜನೆಗಳ ಅಡಿಯಲ್ಲಿ (ಎಸ್‌ಸಿಎಸ್‌ಪಿ/ಟಿಎಸ್‌ಪಿ) ಸರ್ಕಾರವು ಬಜೆಟ್‌ನಲ್ಲಿ ತೆಗೆದಿರಿಸಿದ ಅನುದಾನ ಮತ್ತು ಗ್ಯಾರಂಟಿ ಯೋಜನೆಗಳಿಗೆ ಅದರಲ್ಲಿ ಬಳಕೆ ಮಾಡಿಕೊಂಡ ಅನುದಾನದ ಮಾಹಿತಿಯನ್ನು, ಒಕ್ಕೂಟದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ದುಂಡು ಮೇಜಿನ ಸಭೆಯ ಮುಂದೆ ಇರಿಸಿದರು.
‘ದಲಿತ ಸಂಘಟನೆಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ವೈಯಕ್ತಿಕ ಸಮಸ್ಯೆಗಳ ಕುರಿತ ಮನವಿಗಳನ್ನೇ ಮುಂದಿಡಲಾಯಿತು. ಸಿದ್ದರಾಮಯ್ಯ ಸಹ ಇತರ ವಿಚಾರಗಳನ್ನು ಪ್ರಸ್ತಾಪಿಸಲಿಲ್ಲ. ಸಭೆ ಸಂಪೂರ್ಣ ವಿಫಲವಾಗಿದೆ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
‘ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದೆಡೆ ಕಸಿದುಕೊಳ್ಳುತ್ತಿದೆ. ದಲಿತರಿಗೆ ಅನ್ಯಾಯ ಮಾಡುತ್ತಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಬಜೆಟ್‌ನಲ್ಲಿ ಖಾತರಿ ಕೊಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಬೇಕು’ ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಆರ್‌ಪಿಐ, ಶೋಷಿತ ಸಮುದಾಯಗಳ ವೇದಿಕೆ, ಹಿಂದ ಸಂಘಟನೆಗಳ ಒಕ್ಕೂಟ, ಛಲವಾದಿ ಯುವ ಬ್ರಿಗೇಡ್, ದಲಿತ ಸಂರಕ್ಷ ಸೇನೆ, ಭೀಮ್ ಆರ್ಮಿ ಸೇರಿ ಹಲವು ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.