ADVERTISEMENT

ಪ್ರವಾಹ: ಆಗಸ್ಟ್‌–ಸೆಪ್ಟೆಂಬರ್‌ ವೇಳೆ ರಾಜ್ಯದಾದ್ಯಂತ 13,553 ಮನೆಗಳಿಗೆ ಹಾನಿ

ನೆರೆ ಸಂತ್ರಸ್ತರಿಗೆ ₹35.49 ಕೋಟಿ ಪರಿಹಾರ ಬಿಡುಗಡೆ

ಸಿದ್ದು ಆರ್.ಜಿ.ಹಳ್ಳಿ
Published 19 ಅಕ್ಟೋಬರ್ 2020, 4:59 IST
Last Updated 19 ಅಕ್ಟೋಬರ್ 2020, 4:59 IST
ಹಿರೇಕೆರೂರು ತಾಲ್ಲೂಕು ದಾಸನಕೊಪ್ಪ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕುಸಿದಿರುವ ಮನೆ 
ಹಿರೇಕೆರೂರು ತಾಲ್ಲೂಕು ದಾಸನಕೊಪ್ಪ ಗ್ರಾಮದಲ್ಲಿ ಧಾರಾಕಾರ ಮಳೆಗೆ ಕುಸಿದಿರುವ ಮನೆ    

ಹಾವೇರಿ: ಆಗಸ್ಟ್‌–ಸೆಪ್ಟೆಂಬರ್‌ ತಿಂಗಳಲ್ಲಿ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ರಾಜ್ಯದ 21 ಜಿಲ್ಲೆಗಳಲ್ಲಿ 13,553 ಮನೆಗಳಿಗೆ ಹಾನಿಯಾಗಿದೆ. ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್‌/ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ₹35.49 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.

ಪೂರ್ಣ ಹಾನಿಯಾದ ಮನೆಗೆ ₹5 ಲಕ್ಷ, ತೀವ್ರ ಹಾನಿಯಾದ ಮನೆಗೆ ₹3 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹50 ಸಾವಿರ ಪರಿಹಾರವನ್ನು ಮಾರ್ಗಸೂಚಿಯಂತೆ ನೀಡಬೇಕಿದೆ.ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳ ಪುನರ್‌ ನಿರ್ಮಾಣ ಅಥವಾ ದುರಸ್ತಿ ಕಾರ್ಯ ಕೈಗೊಳ್ಳಲು ಸಂತ್ರಸ್ತರಿಗೆ ಕೂಡಲೇ ಹಣ ನೀಡುವಂತೆ ಸೂಚಿಸಲಾಗಿದೆ.

ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಬಿಡುಗಡೆ ಮಾಡಿರುವ ಅನುದಾನವನ್ನು ನಿಯಮಾನುಸಾರ ಪಾವತಿಸಲು ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಅನುಮತಿ ನೀಡಲಾಗಿದೆ.

ADVERTISEMENT

ಸಂತ್ರಸ್ತರ ಖಾತೆಗೆ ನೇರ ಪಾವತಿ

ಪರಿಹಾರ ಮೊತ್ತವನ್ನು ನೆರೆ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ನೇರವಾಗಿ ಆರ್‌.ಟಿ.ಜಿ.ಎಸ್‌ ಮೂಲಕ ಜಮಾ ಮಾಡಬೇಕು ಹಾಗೂ ಫಲಾನುಭವಿಗಳ ವಿವರವನ್ನು ಆರ್‌.ಜಿ.ಆರ್‌.ಎಚ್‌.ಸಿ.ಎಲ್‌. ತಂತ್ರಾಂಶದಲ್ಲಿ ನಮೂದಿಸಬೇಕು. ಬಿಡುಗಡೆ ಮಾಡಿದ ಅನುದಾನ ಉಪಯೋಗಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಆಯಾ ಜಿಲ್ಲಾಧಿಕಾರಿಗಳು ರಾಜೀವಗಾಂಧಿ ವಸತಿ ನಿಗಮಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ನಾಗರಾಜು ಎಸ್‌. ಸೂಚನೆ ನೀಡಿದ್ದಾರೆ.

ಲೋಪವಾಗದಂತೆ ಎಚ್ಚರಿಕೆ

ಬಿಡುಗಡೆಯಾದ ಅನುದಾನದ ಬಳಕೆಯಲ್ಲಿ ಲೋಪ ದೋಷಗಳಾದಲ್ಲಿ ಜಿಲ್ಲಾಧಿಕಾರಿ ಮತ್ತು ರಾಜೀವ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ನೇರವಾಗಿ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

‘ಹಾವೇರಿ ಜಿಲ್ಲೆಯಲ್ಲಿ 5 ಮನೆಗಳು ಪೂರ್ಣಹಾನಿ, 311 ಮನೆಗಳು ತೀವ್ರ ಹಾನಿ ಹಾಗೂ 484 ಮನೆಗಳು ಭಾಗಶಃ ಹಾನಿಯಾಗಿವೆ. 935 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನೂ 534 ಪರಿಹಾರ ಅರ್ಜಿ ಪರಿಶೀಲನೆ ಬಾಕಿಯಿದೆ. ಜಿಲ್ಲೆಗೆ ₹2.90 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.