
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿ ಕೆಲವು ಸೌಲಭ್ಯ ಕಲ್ಪಿಸುವಂತೆ ಮಾಡಿದ್ದ ಮನವಿಗೆ ಕೋರ್ಟ್ ಮನ್ನಣೆ ನೀಡಿಲ್ಲ.
‘ಆರೋಗ್ಯ ಸರಿಯಿಲ್ಲ. ಬೆನ್ನು ನೋವು ಇದೆ. ಜತೆಗೆ ಜೈಲಿನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಆದ್ದರಿಂದ ಹೆಚ್ಚುವರಿ ಹಾಸಿಗೆ, ದಿಂಬು ಮತ್ತು ಬೆಡ್‍ಶೀಟ್ ನೀಡಲು ಜೈಲಿನ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಕೋರಿ ನ್ಯಾಯಾಲಯಕ್ಕೆ ದರ್ಶನ್ ಅವರು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ್ದ ನಗರದ 57ನೇ ಸಿಸಿಎಚ್ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿತ್ತು. ಹೆಚ್ಚುವರಿ ಸೌಲಭ್ಯ ಕಲ್ಪಿಸುವುದಕ್ಕೆ ನ್ಯಾಯಾಲಯ ನಿರಾಕರಿಸಿದೆ. ಜೈಲು ಕೈಪಿಡಿ ಪ್ರಕಾರವೇ ಸೌಲಭ್ಯ ಕಲ್ಪಿಸಬಹುದು ಎಂದು ಹೇಳಿದೆ.
ತಿಂಗಳಿಗೊಮ್ಮೆ ಮನೆಯಿಂದ ಬೆಡ್‌ಶೀಟ್ ಹಾಗೂ ಬಟ್ಟೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವಂತೆಯೂ ದರ್ಶನ್ ಅವರು ಮನವಿ ಮಾಡಿದ್ದರು. ಅಗತ್ಯವಿದ್ದರೆ ಕ್ವಾರಂಟೈನ್ ಬ್ಯಾರಕ್‌ನಿಂದ ಬೇರೆ ಬ್ಯಾರಕ್‌ಗೆ ಸ್ಥಳಾಂತರ ಮಾಡುವ ನಿರ್ಧಾರವನ್ನು ಜೈಲು ಅಧಿಕಾರಿಗಳೇ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.
ದರ್ಶನ್ ಅವರಿಗೆ ಕನಿಷ್ಠ ಸೌಲಭ್ಯ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಕಾರಾಗೃಹದಲ್ಲಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯವು ಸೂಚಿಸಿತ್ತು.
ಪ್ರಾಧಿಕಾರದ ಬೆಂಗಳೂರು ಜಿಲ್ಲಾ ವಿಭಾಗದ ಸದಸ್ಯ ಕಾರ್ಯದರ್ಶಿ ಬಿ.ವರದರಾಜು ನೇತೃತ್ವದ ತಂಡವು ಕಾರಾಗೃಹದಲ್ಲಿ ಪರಿಶೀಲನೆ ನಡೆಸಿ ಅಕ್ಟೋಬರ್ 17ರಂದು ವರದಿ ಸಲ್ಲಿಸಿತ್ತು.
‘ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಬಿಸಿಲಿನಲ್ಲಿ ನಡಿಗೆಗೆ ಅವಕಾಶ ಹೊರತುಪಡಿಸಿ, ಜೈಲಿನ ಕೈಪಿಡಿ ಅನುಸಾರವೇ ಸೌಲಭ್ಯ ಕಲ್ಪಿಸಲಾಗುತ್ತಿದೆ’ ಎಂದು ತಂಡವು ವರದಿ ಸಲ್ಲಿಸಿತ್ತು.
‘ದರ್ಶನ್ ಅವರನ್ನು ಇರಿಸಲಾಗಿರುವ ಬ್ಯಾರಕ್ನಲ್ಲಿ ಭಾರತೀಯ ಹಾಗೂ ಪಾಶ್ಚಿಮಾತ್ಯ ಶೈಲಿಯ ಎರಡು ಶೌಚಾಲಯಗಳಿವೆ. ವಿಚಾರಣಾಧೀನ ಕೈದಿಗೆ ಹಾಸಿಗೆ, ದಿಂಬಿಗೆ ಅವಕಾಶ ಇಲ್ಲ. ನಿಯಮದಂತೆ ದರ್ಶನ್ ಅವರಿಗೆ ಒಂದು ತಾಸು ನಡಿಗೆ ಹಾಗೂ ಆಟವಾಡಲು ಅವಕಾಶ ನೀಡಬಹುದು. ಆದರೆ, ದರ್ಶನ್ ಅವರು ಸಿನಿಮಾ ನಟ ಆಗಿರುವುದರಿಂದ ಓಡಾಡಿದರೆ ಇತರೆ ಬ್ಯಾರಕ್‌ನವರು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್ಮೆಂಟ್ಗಳಿಂದ ಫೋಟೊ ತೆಗೆಯುತ್ತಾರೆಂದು ಜೈಲಾಧಿಕಾರಿ ಆಕ್ಷೇಪಿಸಿದ್ದಾರೆ. ಜೈಲಿನ ಶಿಸ್ತುಪಾಲನೆ ಹಾಗೂ ನಿರ್ವಹಣೆ ಹೊರತುಪಡಿಸಿ, ನಡಿಗೆಗೆ ಹಾಗೂ ಆಟಕ್ಕೆ ಅವಕಾಶ ನೀಡಬೇಕು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ದರ್ಶನ್ ಮತ್ತು ಪವಿತ್ರಾಗೌಡ ಸೇರಿ ಪ್ರಕರಣದ 6 ಆರೋಪಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ಉಳಿದ ಆರೋಪಿಗಳು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಾಕ್ಷಿಗಳ ವಿಚಾರಣೆ ಕೋರಿ ಎಸ್‍ಪಿಪಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್ ಅ.31ರಂದು ದರ್ಶನ್ ಸೇರಿ ಎಲ್ಲಾ ಆರೋಪಿಗಳ ವಿರುದ್ಧದ ದೋಷಾರೋಪಣೆಯ ಕಾನೂನು ಪ್ರಕ್ರಿಯೆ ಆರಂಭಿಸುವುದಾಗಿ ನ್ಯಾಯಾಲಯವು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.