ADVERTISEMENT

ದಸರಾ ಉದ್ಘಾಟನೆ | ‘ಸಾಬರು ಬಿಟ್ರೆ ಬೇರಾರೂ ಸಿಗೋದಿಲ್ವಾ?’: ಶಾಸಕ ಅರವಿಂದ ಬೆಲ್ಲದ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 10:49 IST
Last Updated 25 ಆಗಸ್ಟ್ 2025, 10:49 IST
   

ಹೊಸಪೇಟೆ: ‘ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಯಾಕೆ ಬೇಕು? ಇವರಿಗೆ ಸಾಬರು ಬಿಟ್ಟರೆ ಯಾರೂ ಸಿಗೋದಿಲ್ವಾ?’ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಾನು ಮುಷ್ತಾಕ್ ಮುಸ್ಲಿಂ‌ ಧರ್ಮದವರು, ಅವರಿಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇರುವುದಿಲ್ಲ, ಅವರು ಪೂಜೆ ಮಾಡಲು ಒಪ್ಪಿಕೊಂಡರೆ, ಹಿಂದೂ ಧರ್ಮದಲ್ಲಿ ನಂಬಿಕೆ ಎಂದು ಹೇಳಿದರೆ ವಿಚಾರ ಮಾಡಬಹುದು’ ಎಂದರು.

‘ಮುಸ್ಲಿಮರಿಗೆ ಮಾತ್ರ ನನ್ನ ಸ್ಪಂದನೆ, ಹಿಂದೂಗಳಿಗೆ ಇಲ್ಲ ಎಂಬ ಧೋರಣೆ ಸಿಎಂ ಅವರದ್ದು. ಅವರು ಇಲ್ಲಿ ಹಿಂದೂಗಳ ಭಾವನೆ ಕೆರಳಿಸುವ ಕೆಲಸ ಮಾಡಿದ್ದಾರೆ. ಜಾತ್ಯತೀತ ರಾಷ್ಟ್ರವಾದರೆ  ಹಿಂದೂಗಳ ಪೂಜೆಗೆ ಮುಸ್ಲಿಮರು ಯಾಕೆ ಬರಬೇಕು?’ ಎಂದು ಅವರು ಕೇಳಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿ ದೇಶ, ದೇಶದ ವಿಚಾರಗಳ ಬಗ್ಗೆ ರಚನಾತ್ಮಕವಾಗಿ ಮಾತನಾಡಿದರೆ ಅಲ್ಲಿಂದ ಹೊರಗೆ ಹೋಗಬೇಕಾದ ಪರಿಸ್ಥಿತಿ ಇದೆ, ಅಲ್ಲಿ ಅಲ್ಲಿ ದೇಶ ವಿರೋಧಿ, ನಾಕಾರಾತ್ಮಕವಾಗಿಯೇ ಮಾತನಾಡಬೇಕಾಗಿದೆ’ ಎಂದು ಡಿಕೆಶಿ ಹಾಡಿದ ಆರ್‌ಎಸ್ಎಸ್ ಹಾಡು ಉಲ್ಲೇಖಿಸಿ ಹೇಳಿದರು.

ಮೊದಲೇ ಹೇಳಿದ್ದೆ: ‘ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ವಿಚಾರವನ್ನು ನಾನು ಮೊದಲೇ ಹೇಳಿದ್ದೆ. ಈಗ ಅದು ಹೊರಬಂದಿದೆ. ಷಡ್ಯಂತರದ ಹಿಂದಿನ ಶಕ್ತಿಯೇ ಸಿದ್ದರಾಮಯ್ಯ. ಮುಸುಕುಧಾರಿಯನ್ನು ಬಂಧಿಸುವ ಬದಲಿಗೆ ಅವನು ಹೇಳಿದಂತೆ ಕೇಳಿದ್ದೇ ತಪ್ಪು. ಹಿಂದೂಗಳ ದೇವಸ್ಥಾನ, ಅದನ್ನು ನಡೆಸುವವರ ಮೇಲೆ ಶ್ರದ್ಧೆ ಕಡಿಮೆ ಆಗಬೇಕು, ಅಂದಾಗ ಮಾತ್ರ ಮತಾಂತರ ನಡೆಸಲು ಸಾಧ್ಯವಾಗುತ್ತದೆ ಎಂಬ ಧೋರಣೆ ಇದ್ದಂತಿದೆ’ ಎಂದು ಬೆಲ್ಲದ ಹೇಳಿದರು.

‘ಸಸಿಕಾಂತ್ ಸೆಂಥಿಲ್‌ ಒಬ್ಬ ಎಡಪಂಥೀಯ, ಆತ ದೇಶ ವಿರೋಧಿ, ನಮ್ಮ ವ್ಯವಸ್ಥೆ ವಿರೋಧಿಸುವ ವ್ಯಕ್ತಿ. ಅವರು ಚರ್ಚ್‌ಗಳ ಬಗ್ಗೆ ಮಾತನಾಡಲಿ,  ಪಂಜಾಬ್‌ನಲ್ಲಿ ರೇಪ್ ಮಾಡಿದ ಪಾದ್ರಿಯನ್ನು ಸತ್ಕಾರ ಮಾಡಿಕೊಂಡು ಕರೆದುಕೊಂಡು ಬಂದರು, ಅದರ ಬಗ್ಗೆ ಮಾತನಾಡಲಿ, ಆರ್‌ಎಸ್ಎಸ್‌ನಲ್ಲಿ ಎರಡು ಗುಂಪು ಇದೆ ಎಂದು ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲು ಕಾಂಗ್ರೆಸ್ ಯತ್ನಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.