ADVERTISEMENT

ಮೈಸೂರು ದಸರಾ: ₹ 1.70 ಕೋಟಿ ಆದಾಯ ನಿರೀಕ್ಷೆಯಲ್ಲಿ ಕೆಎಸ್‌ಆರ್‌ಟಿಸಿ

ಬೆಂಗಳೂರು–ಮೈಸೂರು ನಡುವೆ 325 ಹೆಚ್ಚುವರಿ ಬಸ್ ಸಂಚಾರ

ಡಿ.ಬಿ, ನಾಗರಾಜ
Published 3 ಅಕ್ಟೋಬರ್ 2019, 17:49 IST
Last Updated 3 ಅಕ್ಟೋಬರ್ 2019, 17:49 IST
   

ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಬೆಂಗಳೂರು–ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರು–ಪ್ರವಾಸಿಗರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ 325 ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸಲು ಸಜ್ಜಾಗಿದೆ.

ದಸರಾ ಆರಂಭವಾಗಿದೆ. ಅ.3ರಿಂದ ಜನದಟ್ಟಣೆ ಹೆಚ್ಚುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ನಿತ್ಯ ಸಂಚರಿಸುವ ಬಸ್‌ಗಳ ಜತೆಯಲ್ಲೇ ಈ ಹೆಚ್ಚುವರಿ ಬಸ್‌ಗಳ ಸಂಚಾರವನ್ನು ಅ.9ರವರೆಗೂ ನಡೆಸಲು ಮೈಸೂರು ಗ್ರಾಮಾಂತರ, ಬೆಂಗಳೂರು ಕೇಂದ್ರ ವಿಭಾಗದಿಂದ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿಯ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್‌.ಅಶೋಕ್‌ಕುಮಾರ್ ತಿಳಿಸಿದರು.

ನೆರೆಯ ಹಾಸನ, ಚಾಮರಾಜನಗರ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆಯ ಬೇರೆ ಬೇರೆ ವಿಭಾಗಗಳು ಸಹ ತಮ್ಮೂರಿನಿಂದ ಮೈಸೂರು ದಸರಾ ಅಂಗವಾಗಿ ವಿಶೇಷ ಬಸ್‌ ಸಂಚಾರ ನಡೆಸಲಿವೆ. ಎಷ್ಟು ಬಸ್‌ ಓಡಿಸಬೇಕು ? ಎಂಬುದನ್ನು ಆಯಾ ವಿಭಾಗ, ಡಿಪೋ ನಿರ್ಧರಿಸಲಿವೆ. ಅಕ್ಕಪಕ್ಕದ ರಾಜ್ಯದ ಸಾರಿಗೆ ಸಂಸ್ಥೆಗಳು ಸಹ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಮೈಸೂರಿಗೆ ಕಳುಹಿಸಲಿವೆ ಎಂದು ಅವರು ಹೇಳಿದರು.

ADVERTISEMENT

ಹೆಚ್ಚಿನ ವಹಿವಾಟು: ‘ಹಿಂದಿನ ವರ್ಷದ ದಸರಾ ಸಂದರ್ಭ ₹ 1.40 ಕೋಟಿ ಆದಾಯ ದೊರೆತಿತ್ತು. ಈ ಬಾರಿ ₹ 1.70 ಕೋಟಿ ಆದಾಯ ನಿರೀಕ್ಷಿಸಿದ್ದೇವೆ’ ಎಂದು ಅಶೋಕ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು–ಮೈಸೂರು ನಡುವೆ ನಿತ್ಯವೂ 500 ಟ್ರಿಪ್‌ ಬಸ್‌ ಸಂಚಾರವಿದೆ. ದಸರೆಯಲ್ಲಿ ಹೆಚ್ಚುವರಿಯಾಗಿ 300 ಟ್ರಿಪ್‌ಗೂ ಹೆಚ್ಚು ಬಸ್‌ ಸಂಚಾರ ನಡೆಸಲಾಗುವುದು. ಆಯುಧಪೂಜೆ, ವಿಜಯದಶಮಿಯಂದು ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಜನದಟ್ಟಣೆ ಹೆಚ್ಚಿದಂತೆ ಬಸ್‌ಗಳ ಸಂಚಾರವನ್ನು ಹೆಚ್ಚಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.