ADVERTISEMENT

ಮೈಸೂರು ದಸರಾಕ್ಕೆ ಕೊಡಗಿನ ಸಾಕಾನೆ

ಮದವೇರಿದ್ದ ಎರಡು ಆನೆಗಳೂ ಆಯ್ಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:58 IST
Last Updated 17 ಆಗಸ್ಟ್ 2019, 12:58 IST
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ದಸರಾ ಮಹೋತ್ಸವಕ್ಕೆ ಕಳುಹಿಸಿಕೊಡುವ ಸಾಕಾನೆಗಳು 
ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರದಿಂದ ದಸರಾ ಮಹೋತ್ಸವಕ್ಕೆ ಕಳುಹಿಸಿಕೊಡುವ ಸಾಕಾನೆಗಳು    

ಕುಶಾಲನಗರ: ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಾಕಾನೆ ಗಜಪಯಣಕ್ಕೆ ಇದೇ 22ರಂದು ಚಾಲನೆ ಸಿಗಲಿದೆ.

ವಿಜಯದಶಮಿ ಹಬ್ಬದ ಅಂಗವಾಗಿ ನಡೆಯುವ ಜಂಬೂ ಸವಾರಿಗೆ 52 ದಿನಗಳು ಬಾಕಿ ಉಳಿದಿವೆ. ದಸರಾಕ್ಕೆ ಸಾಕಾನೆ ಕಳುಹಿಸಲು ತಯಾರಿ ನಡೆಯುತ್ತಿದೆ. ದುಬಾರೆ ಆನೆ ಶಿಬಿರದಿಂದ ಐದು ಆನೆಗಳನ್ನು ತಜ್ಞರ ತಂಡ ಆಯ್ಕೆ ಮಾಡಿದೆ.ಹುಣಸೂರಿನಿಂದಗಜಪಯಣವು ಆರಂಭವಾಗಲಿದ್ದು, ಅಲ್ಲಿಗೆ ದುಬಾರೆ ಆನೆ ಕಳುಹಿಸಲು ಮಾವುತರು ಹಾಗೂ ಅರಣ್ಯಾಧಿಕಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕಾವೇರಿ, ಧನಂಜಯ್ಯ, ಗೋಪಿ, ಪ್ರಶಾಂತ್ ಹಾಗೂ ವಿಜಯ ಆನೆಗಳನ್ನು ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಸಾಮೃರ್ಥ್ಯವಿದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ವೈದ್ಯರು ತಿಳಿಸಿದ್ದಾರೆ.

ADVERTISEMENT

ನಂಜರಾಯಪಟ್ಟಣ ಬಳಿ ಹರಿಯುವ ಕಾವೇರಿ ನದಿಯ ದ್ವೀಪದಲ್ಲಿರುವ ಪುರಾತನ ಕಾಲದ ದುಬಾರೆ ಸಾಕಾನೆ ಶಿಬಿರಲ್ಲಿ ಇತ್ತೀಚೆಗೆ ಹಾಸನದಲ್ಲಿ ಸೆರೆ ಹಿಡಿದಿರುವ ಪುಂಡಾನೆ, ಮರಿಯಾನೆ ಸೇರಿ ಒಟ್ಟು 29 ಆನೆಗಳಿವೆ. ಈ ಪೈಕಿ 3 ಆನೆಗಳನ್ನು ಆನೆಕಾಡು ಸಾಕಾನೆ ಶಿಬಿರದಲ್ಲಿವೆ.

ಮದವೇರಿದ್ದ ಆನೆಗಳೂ ಆಯ್ಕೆ:

ಎರಡು ತಿಂಗಳ ಹಿಂದೆ ಧನಂಜಯ್ಯ ಹಾಗೂ ಗೋಪಿ ಹೆಸರಿನ ಆನೆಗೆ ಮದವೇರಿತ್ತು. ಕಾಡಿಗೆ ಬಿಟ್ಟಿದ್ದ ವೇಳೆ ಅರಣ್ಯದೊಳಗೆ ಹೆಣ್ಣಾನೆ ಸಾಂಗತ್ಯ ಅರಸಿಕೊಂಡು, ನಾಲ್ಕೈದು ದಿನ ಕಾಡಿನಲ್ಲಿ ಉಳಿದಿದ್ದವು. ಅಲ್ಲದೇ, ಈ ಆನೆಗಳು ತೀವ್ರ ಉದ್ರೇಕಕಾರಿಯಾಗಿ ವರ್ತಿಸುವ ಮೂಲಕ ಆತಂಕ ಸೃಷ್ಟಿಸಿದ್ದವು. ನಂತರ, ದುಬಾರೆ ಮಾವುತರು ಹಾಗೂ ಕಾವಾಡಿಗರು ಸಾಕಾನೆಗಳೊಂದಿಗೆ ಕಾಡಿಗೆ ತೆರಳಿ, ಎರಡು ಆನೆಗಳನ್ನು ಮರಳಿ ಶಿಬಿರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದರು. ದುಬಾರೆ ಸಾಕಾನೆ ಶಿಬಿರಕ್ಕೆ 2 ಬಾರಿ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅಚ್ಚರಿ ಎಂದರೆ, ಈ ಎರಡೂ ಆನೆಗಳನ್ನೂ ಜಂಬೂ ಸವಾರಿಗೆ ಆಯ್ಕೆ ಮಾಡಲಾಗಿದೆ.

‘ಧನಂಜಯ್ಯ ಹಾಗೂ ಗೋಪಿ ಆನೆಗಳಿಗೆ ಇಳಿದಿದ್ದು ಸಹಜ ಸ್ಥಿತಿಯಲ್ಲಿವೆ. ಹಾಗಾಗಿ, ಇವುಗಳಿಂದ ಯಾವುದೇ ತೊಂದರೆ ಎದುರಾಗುವುದಿಲ್ಲ’ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ದುಬಾರೆ ಸಾಕಾನೆ ಶಿಬಿರದಿಂದ ಪ್ರತಿವರ್ಷ 6 ಆನೆಗಳನ್ನು ಎರಡು ತಂಡವಾಗಿ ಕಳುಹಿಸಿಕೊಡಲಾಗುತಿತ್ತು. ಆದರೆ, ಈ ವರ್ಷ ‘ಹರ್ಷ’ ಹೆಸರಿನ ಕೈಬಿಡಲಾಗಿದೆ. ಕೇವಲ, 5 ಆನೆಗಳ ತಂಡ ಮಾತ್ರ ದಸರಾದಲ್ಲಿ ಪಾಲ್ಗೊಳ್ಳುತ್ತಿವೆ. ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸಹ ಮೈಸೂರಿಗೆ ಪ್ರಯಾಣ ಬೆಳೆಸಲಿದೆ. ದಸರಾ ಮುಗಿಯುವ ತನಕ ಅಲ್ಲಿಯೇ ಮೆಚ್ಚಿನ ಆನೆಗಳನ್ನು ಸಾಕುತ್ತಾ ಇರಲಿದ್ದಾರೆ. ದಸರಾ ಮುಗಿದ ಬಳಿಕ ಮತ್ತೆ ದುಬಾರೆಯತ್ತ ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.