ADVERTISEMENT

ಹೈಕೋರ್ಟ್‌ ಕಠಿಣ ಆದೇಶ | ಕಡೆಗೂ ತಂದೆಯ ಬಳಿ ಬಂದ ಮಗಳು...

ಕೌಟುಂಬಿಕ ಕಲಹದ ಪ್ರಕರಣದಲ್ಲಿ ಹೇಬಿಯಸ್ ಕಾರ್ಪಸ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 2:15 IST
Last Updated 9 ಜೂನ್ 2023, 2:15 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಕೌಟುಂಬಿಕ ಕಲಹದ ಪ್ರಕರಣವೊಂದರಲ್ಲಿ ವೃತ್ತಿನಿರತ ವೈದ್ಯೆಯೊಬ್ಬರು ತಮ್ಮ ಮಗಳನ್ನು ಪತಿಯ (ಮಗುವಿನ ತಂದೆ) ವಶಕ್ಕೆ ನೀಡದೆ ಈ ಸಂಬಂಧದ ಕೋರ್ಟ್‌ ಆದೇಶಗಳನ್ನೆಲ್ಲಾ ಉಲ್ಲಂಘಿಸಿ ಬೆಂಗಳೂರು ಹಾಗೂ ದೆಹಲಿ ಪೊಲೀಸರ ಕೈಗೂ ಸಿಗದೆ ನಾಪತ್ತೆಯಾಗಿದ್ದರು. ಅಂತಿಮವಾಗಿ ರಾಜ್ಯ ಹೈಕೋರ್ಟ್‌, ವೈದ್ಯೆಯ ವಿರುದ್ಧ ಸಿವಿಲ್ ಮತ್ತು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಕಠಿಣ ಆದೇಶ ಹೊರಡಿಸಿದ ನಂತರ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದ ಅಪರೂಪದ ಪ್ರಸಂಗ ಜರುಗಿದೆ.

ಪತಿಯನ್ನು (ಮಗುವಿನ ತಂದೆ), ’ಹೆಣ್ಣು ಮಗುವಿನ ಶಾಶ್ವತ ಪಾಲಕ‘ ಎಂದು ನಿಯೋಜಿಸಿ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿದ್ದವು. ಆದರೆ, ವೈದ್ಯೆ ಈ ಆದೇಶ ಪಾಲನೆ ಮಾಡಿರಲಿಲ್ಲ. ಮಗಳನ್ನು ವಶಕ್ಕೆ ಒಪ್ಪಿಸುವಂತೆ ಕೋರಿ ಪತಿ ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಲೋಕ್‌ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠವು, ವೈದ್ಯೆಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು.

ಬೆಂಗಳೂರು ಮತ್ತು ದೆಹಲಿ ಪೊಲೀಸರು ಸಾಕಷ್ಟು ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಆಕೆ ಸುಪ್ರಿಂ ಕೋರ್ಟ್‌ಗೆ ನೀಡಿದ್ದ ಸ್ವಯಂ ಪ್ರೇರಿತ ವಾಗ್ದಾನದ ಅನುಸಾರ ಹೈಕೋರ್ಟ್‌ಗೆ ಹಾಜರಾಗಿದ್ದರು. ಆ ಸಮಯದಲ್ಲೂ ಆಕೆ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿರಲಿಲ್ಲ. ವೈದ್ಯೆಯ ಈ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ’ಇದು ಕಾನೂನಿನ ಸ್ಪಷ್ಟ ದುರ್ಬಳಕೆ. ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ‘ ಎಂದು ಅತೃಪ್ತಿ ವ್ಯಕ್ತಪಡಿಸಿತ್ತು.

ADVERTISEMENT

’ಪೊಲೀಸರು ಆಕೆ ಉದ್ಯೋಗದಲ್ಲಿರುವ ಆಸ್ಪತ್ರೆಯನ್ನು ಸಂಪರ್ಕಿಸಬೇಕು. ಮಗುವನ್ನು ಪತಿಯ ಸುಪರ್ದಿಗೆ ನೀಡುವವರೆಗೂ ಆಕೆಯ ವೇತನ ತಡೆಹಿಡಿಯುವಂತೆ ಸೂಚಿಸಬೇಕು. ಹಾಗೆಯೇ, ಪತಿಯು ಪತ್ನಿ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ವೈದ್ಯೆ ಮಗಳನ್ನು ತಂದೆಯ (ಪತಿ) ಸುಪರ್ದಿಗೆ ಒಪ್ಪಿಸುವುದನ್ನು ನಗರ ಪೊಲೀಸ್ ಆಯುಕ್ತರು 24 ಗಂಟೆಯಲ್ಲಿ ಖಾತರಿಪಡಿಸಬೇಕು‘ ಎಂದು ಕಠಿಣ ಆದೇಶ ಹೊರಡಿಸಿತ್ತು.

ಈ ಆದೇಶ ಹೊರಬಿದ್ದ ಕೂಡಲೇ ಮಹಿಳೆ ಪುನಃ ಮಗುವಿನೊಂದಿಗೆ ಪರಾರಿಯಾಗಬಹುದು ಎಂಬ ಆತಂಕದಿಂದ ಪೊಲೀಸರು ಆಕೆಯ ಚಲನವಲನದ ಮೇಲೆ ಕಣ್ಣಿಟ್ಟು ಕಾವಲು ನಿಂತರು. ‘ಹೈಕೋರ್ಟ್ ಆದೇಶದಂತೆ ಮಗುವನ್ನು ಪತಿಯ ವಶಕ್ಕೆ ನೀಡಬೇಕು‘ ಎಂದು ತಿಳಿ ಹೇಳಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ವೈದ್ಯೆ, ’ನ್ಯಾಯಾಲಯವೇ 24 ಗಂಟೆ ಸಮಯ ನೀಡಿರುವುದರಿಂದ ತಕ್ಷಣವೇ ಮಗಳನ್ನು ಪತಿಗೆ ಒಪ್ಪಿಸಲಾರೆ‘ ಎಂದು ಪಟ್ಟುಹಿಡಿದಿದ್ದರು. ಆದರೆ, ಕೆಲಹೊತ್ತಿನ ಹೈಡ್ರಾಮಾದ ಬಳಿಕ ಪೊಲೀಸರ ಕಣ್ಗಾವಲಿನಲ್ಲಿಯೇ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.