ADVERTISEMENT

ಐಎಂಎಗೆ ಕ್ಲೀನ್‌ಚಿಟ್‌ ನೀಡಲು ₹1.5ಕೋಟಿ ಲಂಚ ಪಡೆದ ಆರೋಪ–ಎಸ್‌ಐಟಿ ಕಸ್ಟಡಿಗೆ ಡಿಸಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:01 IST
Last Updated 9 ಜುಲೈ 2019, 20:01 IST
ಬಿ.ಎಂ.ವಿಜಯಶಂಕರ್
ಬಿ.ಎಂ.ವಿಜಯಶಂಕರ್   

ಬೆಂಗಳೂರು: ಐಎಂಎ (ಐ ಮಾನಿಟರಿ ಅಡ್ವೈಸರಿ) ಸಮೂಹ ಕಂಪನಿಗೆ ಕ್ಲೀನ್‌ ಚಿಟ್‌ ನೀಡಲು ₹ 1.5 ಕೋಟಿ ಲಂಚ ಪಡೆದ ಆರೋಪದಡಿ ಎಸ್‌ಐಟಿ (ವಿಶೇಷ ತನಿಖಾ ತಂಡ) ಬಂಧನದಲ್ಲಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಅವರನ್ನು ಇದೇ 12ರವರೆಗೆ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ಸೋಮವಾರವಷ್ಟೇ ವಿಜಯಶಂಕರ್‌ ಅವರನ್ನು ಬಂಧಿಸಿದ್ದ ಎಸ್ಐಟಿ ಪೊಲೀಸರು ಮಂಗಳವಾರ ಸಿಟಿ ಸಿವಿಲ್‌ ಸೆಷನ್ಸ್ ಕೋರ್ಟ್‌ನ ಪ್ರಧಾನ ನ್ಯಾಯಾಧೀಶ ಶಿವಶಂಕರ ಬಿ.ಅಮರಣ್ಣವರ ಮುಂದೆ ತೆರೆದ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.

‘ಇದೇ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಬೇಕು’ ಎಂಬ ಪ್ರಾಸಿಕ್ಯೂಷನ್‌ ಕೋರಿಕೆಯನ್ನು ನ್ಯಾಯಾಧೀಶರು ಭಾಗಶಃ ಪುರಸ್ಕರಿಸಿದರು.

ADVERTISEMENT

ವಿಜಯಶಂಕರ್ ವಿರುದ್ಧ ಕಮರ್ಶಿಯಲ್‌ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 406, 409, 420, 120 (ಬಿ) ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜ್‌ ಎಸ್‌ಐಟಿ ವಶದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.