ADVERTISEMENT

ಡಿಸಿಸಿ ಬ್ಯಾಂಕ್‌: ಮತದಾನ ಬಹಿಷ್ಕಾರದ ನಡುವೆಯೂ ಅಧ್ಯಕ್ಷರ ಆಯ್ಕೆ

ಬಿಜೆಪಿ–ಜೆಡಿಎಸ್‌ ಮೈತ್ರಿ: ಬಹುಮತ ಇದ್ದರೂ ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರವಿಲ್ಲ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 13:23 IST
Last Updated 17 ನವೆಂಬರ್ 2020, 13:23 IST
ಸಿ.ಪಿ.ಉಮೇಶ್‌
ಸಿ.ಪಿ.ಉಮೇಶ್‌   

ಮಂಡ್ಯ: ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರ ಮತದಾನ ಬಹಿಷ್ಕಾರದ ನಡುವೆಯೂ ಮಂಗಳವಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಅಧ್ಯಕ್ಷ– ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸರ್ಕಾರದಿಂದ ನಾಮನಿರ್ದೇಶಿತಗೊಂಡಿದ್ದ ಸಿ.ಪಿ.ಉಮೇಶ್‌ ಅಧ್ಯಕ್ಷರಾಗಿ, ಜೆಡಿಎಸ್‌ ಬೆಂಬಲಿತ ಎಚ್‌.ಕೆ.ಅಶೋಕ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆ ಆರಂಭಗೊಂಡ ನಂತರ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕ ಎಸ್‌.ಎಚ್‌.ನರಸಿಂಹಯ್ಯ ಅವರು ಮತದಾನದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸಹಕಾರ ಸಂಘಗಳ ಜಂಟಿ ನಿಬಂಧಕರ ನ್ಯಾಯಾಲಯ ತಡೆಯಾಜ್ಞೆ ನೀಡಿತು. ಪ್ರತಿನಿಧಿ ಆಯ್ಕೆ ವಿಚಾರದಲ್ಲಿ ನರಸಿಂಹಯ್ಯ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಆಧರಿಸಿ ಮಧ್ಯಂತರ ಆದೇಶ ನೀಡಿತು. ಇದನ್ನು ಖಂಡಿಸಿ ಕಾಂಗ್ರೆಸ್‌ ಬೆಂಬಲಿತ 7 ಮಂದಿ ನಿರ್ದೇಶಕರು ಮತದಾನ ಬಹಿಷ್ಕರಿಸಿ ಹೊರನಡೆದರು. ಇದಕ್ಕೂ ಮುನ್ನ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಕಾಂಗ್ರೆಸ್‌ ಬೆಂಬಲಿತ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರು.

ಐವರು ಜೆಡಿಎಸ್‌ ಬೆಂಬಲಿತರು, ಒಬ್ಬ ಸರ್ಕಾರದ ನಾಮನಿರ್ದೇಶಿತ , ಒಬ್ಬ ಅಪೆಕ್ಸ್‌ ಬ್ಯಾಂಕ್‌ ಪ್ರತಿನಿಧಿ ಹಾಗೂ ಒಬ್ಬರು ಸಹಕಾರ ಸಂಘಗಳ ಉಪ ನಿಬಂಧಕರು ಸೇರಿ 8 ಮತಗಳ ಕೋರಂ ಇದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಮತದಾನಕ್ಕೆ ಅವಕಾಶ ನೀಡಿದರು. ಎಲ್ಲಾ 8 ಮತಗಳೊಂದಿಗೆ ಉಮೇಶ್‌, ಅಶೋಕ್‌ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬಹುಮತ ಇದ್ದರೂ ಅಧಿಕಾರ ಇಲ್ಲ: ಒಟ್ಟು 15 ಮಂದಿ ನಿರ್ದೇಶಕ ಸ್ಥಾನಗಳ ಆಡಳಿತ ಮಂಡಳಿಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 8 ಕಾಂಗ್ರೆಸ್‌, 4 ಸ್ಥಾನ ಜೆಡಿಎಸ್‌ ಬೆಂಬಲಿಗರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಬೆಂಬಲಿತ ಅಮರಾವತಿ ಅಶ್ವತ್ಥ್ ಜೆಡಿಎಸ್‌ಗೆ ಬೆಂಬಲ ನೀಡಿದರು. ಜೊತೆಗೆ ನರಸಿಂಹಯ್ಯ ಅವರನ್ನು ಮತದಾನದಿಂದ ಹೊರಗಿಟ್ಟ ಪರಿಣಾಮ ಕಾಂಗ್ರೆಸ್‌ ಬೆಂಬಲಿತರ ಬಲ 6ಕ್ಕೆ ಕುಸಿಯಿತು.

ಇದರಿಂದ, ಕಾಂಗ್ರೆಸ್‌ ಬೆಂಬಲಿತರು ಬಹುಮತ ಪಡೆದಿದ್ದರೂ ಅಧಿಕಾರ ಪಡೆಯಲು ಸಧ್ಯವಾಗಲಿಲ್ಲ. ಆದರೆ ಒಬ್ಬ ಬೆಂಬಲಿತ ನಿರ್ದೇಶಕ ಇಲ್ಲದಿದ್ದರೂ ಅಧ್ಯಕ್ಷ ಹುದ್ದೆ ಗಿಟ್ಟಿಸಿಗೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಜೆಡಿಎಸ್‌–ಬಿಜೆಪಿ ಮೈತ್ರಿ ಕಾಂಗ್ರೆಸ್ ಪಕ್ಷವನ್ನು ಡಿಸಿಸಿ ಬ್ಯಾಂಕ್‌ ಆಡಳಿತದಿಂದ ದೂರವಿಡಲು ಯಶಸ್ವಿಯಾಯಿತು.

‘ಅಪೆಕ್ಸ್‌ ಬ್ಯಾಂಕ್‌ನಲ್ಲಿ ಆಡಳಿತ ಮಂಡಳಿ ಇಲ್ಲದಿದ್ದರೆ ಅಲ್ಲಿಯ ಪ್ರತಿನಿಧಿಯ ಮತ ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಆದರೂ ಅವರ ಮತ ಪರಿಗಣಿಸಿ ತೀರ್ಪು ಉಲ್ಲಂಘನೆ ಮಾಡಲಾಗಿದೆ. ಅಲ್ಲದೆ, ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಜೋಗಿಗೌಡರ ಮತದಾನದ ಹಕ್ಕು ಕಸಿದುಕೊಂಡಿದೆ. ಇದರ ವಿರುದ್ಧ ಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು’ ಎಂದು ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕ, ಮಾಜಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ನೂತನ ಅಧ್ಯಕ್ಷ ಸಿ.ಪಿ.ಉಮೇಶ್‌ ಮದ್ದೂರು ತಾಲ್ಲೂಕು ಚಿಕ್ಕದೊಡ್ಡಿ ಮೂಲದವರಾಗಿದ್ದು ಉದ್ಯಮಿಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎಸ್‌.ಎಂ.ಕೃಷ್ಣ ಕುಟುಂಬದ ಆಪ್ತರಾಗಿದ್ದರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.