–ಪ್ರಜಾವಾಣಿ ಚಿತ್ರ.
ಬೆಂಗಳೂರು: ಎರಡನೇ ವರ್ಷದ ಎಂಜಿನಿಯರಿಂಗ್ (ಡಿಸಿಇಟಿ) ಪ್ರವೇಶ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನಾ ಕಾರ್ಯ ನಡೆಯುತ್ತಿದ್ದು, ಕೆ.ಆರ್. ವೃತ್ತದ ಸರ್ಕಾರಿ ಎಸ್.ಜೆ. ಪಾಲಿಟೆಕ್ನಿಕ್ ಸೇರಿದಂತೆ ಬೆಂಗಳೂರಿನ ಕೆಲ ಕೇಂದ್ರಗಳಲ್ಲಿ ಗೊಂದಲದ ಗೂಡಾಗಿತ್ತು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ದೂರಿದರು.
ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಜೂನ್ 10ರಿಂದ ಪರಿಶೀಲನೆ ನಡೆಯುತ್ತಿದ್ದು, 37 ಕಾಲೇಜುಗಳ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿತ್ತು. ಅಭ್ಯರ್ಥಿಗಳು ಮುಂಗಡವಾಗಿ ದಿನಾಂಕ ನಿಗದಿ ಮಾಡಿಕೊಂಡು ಆಯಾ ಕಾಲೇಜುಗಳಿಗೆ ಭೇಟಿ ನೀಡಿದರೂ, ಸಮಯಕ್ಕೆ ಸರಿಯಾಗಿ ಪರಿಶೀಲನೆ ಮಾಡದ ಕಾರಣ ಸರದಿ ಸಾಲಿನಲ್ಲಿ ದಿನವಿಡೀ ನಿಲ್ಲಬೇಕಾಯಿತು ಎಂದು ಪೋಕಷರಾದ ರಾಮೇಶ್ವರಪ್ಪ ಹೇಳಿದರು.
‘ಡಿಪ್ಲೊಮಾ ಕೋರ್ಸ್‌ಗಳ ಅಂಕಪಟ್ಟಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಸಮಯಕ್ಕೆ ಸರಿಯಾಗಿ ನೀಡಿಲ್ಲ. ದಾಖಲಾತಿ ಪರಿಶೀಲನಾ ಕಾರ್ಯ ಆರಂಭವಾದ ನಂತರ ವಿತರಣೆ ಮಾಡಿದ್ದಾರೆ. ಅವುಗಳ ನಕಲು ಪ್ರತಿ ತಗೆದುಕೊಂಡು, ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿಕೊಂಡು ಪರಿಶೀಲನೆಗೆ ಹೋಗುವಷ್ಟರಲ್ಲಿ ಹಲವು ವಿದ್ಯಾರ್ಥಿಗಳಿಗೆ ವಿಳಂಬವಾಗಿದೆ. ಹಾಗಾಗಿ, ಜೂನ್ 10ಕ್ಕೆ ಸಮಯ ಪಡೆದವರೂ 12ರಂದು ಬಂದಿದ್ದಾರೆ. ಇದು ದಟ್ಟಣೆಗೆ ಕಾರಣವಾಗಿದೆ. ಸಣ್ಣ ಜಾಗದಲ್ಲಿ ಅಷ್ಟೊಂದು ವಿದ್ಯಾರ್ಥಿಗಳು ಕುರಿಯಂತೆ ತುಂಬಿದ್ದರು’ ಎಂದು ಹಲವು ಪೋಷಕರು ಆರೋಪಿಸಿದರು.
‘ತಾಂತ್ರಿಕ ಶಿಕ್ಷಣ ಇಲಾಖೆ ಡಿಸಿಇಟಿ ಫಲಿತಾಂಶ ಬರುವ ಮೊದಲೇ ಅಂಕಪಟ್ಟಿ ನೀಡಬೇಕು. ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಕಡ್ಡಾಯ ಮಾಡಬಾರದು. ನಿಯಮದಂತೆ ಸ್ವಯಂ ದೃಢೀಕರಣಕ್ಕೆ ಅವಕಾಶ ನೀಡಬೇಕು. ಆಯಾ ಕಾಲೇಜುಗಳಲ್ಲೇ ದಾಖಲಾತಿ ಪರಿಶೀಲನೆಗೆ ವ್ಯವಸ್ಥೆ ಮಾಡಬೇಕು. ಬೆಳಿಗ್ಗೆ ಮತ್ತು ಮಧ್ಯಾಹ್ನ ಎಂದು ಆಯ್ಕೆ ನೀಡುವ ಬದಲು ನಿಗದಿತ ಸಮಯ ನೀಡಬೇಕು’ ಎಂದು ಪೋಷಕರಾದ ಎಂ. ನರಸಿಂಹ ಆಗ್ರಹಿಸಿದರು.
ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೇಮುಗಳಿಗೆ ಪೂರಕವಾದ ಎಲ್ಲ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ವಿಶೇಷ ಪ್ರವರ್ಗದ (ಎನ್‌ಸಿಸಿ, ಕ್ರೀಡೆ, ಸೈನಿಕರು, ಮಾಜಿ ಸೈನಿಕರು, ಮಾಜಿ-ಸಿಎಪಿಎಫ್, ಸಿಎಪಿಎಫ್,- ಕ್ಲೇಮ್ ಮಾಡಿದ ದಾಖಲೆಗಳು) ಕಡ್ಡಾಯವಾಗಿ ಪ್ರಮಾಣ ಪತ್ರ ಪರಿಶೀಲನಾ ಕಾರ್ಯ ಜೂನ್ 13ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.