ADVERTISEMENT

ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 11:20 IST
Last Updated 12 ಡಿಸೆಂಬರ್ 2020, 11:20 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ   

ಬೆಂಗಳೂರು: ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ತೈವಾನ್‌ ಮೂಲದ ವಿಸ್ಟ್ರಾನ್‌ ಕಾರ್ಖಾನೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಕಾರ್ಮಿಕರ ಪ್ರತಿಭಟನೆ ಹಾಗೂ ದೊಂಬಿಯನ್ನು ಖಂಡಿಸಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ, ‘ಪರಿಸ್ಥಿತಿ ಸದ್ಯಕ್ಕೆ ನಿಯಂತ್ರಣದಲ್ಲಿದ್ದು, ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಯಲಿದೆ’ ಎಂದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹಿರಿಯ ಅಧಿಕಾರಿಗಳು ಕೂಡ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ವಿಸ್ಟ್ರಾನ್ ಸಂಸ್ಥೆಯ ಪ್ರತಿನಿಧಿಗಳ ಜತೆಗೂ ಮಾತುಕತೆ ನಡೆಸಿ, ಬಿಕ್ಕಟ್ಟು ಶಮನ ಮಾಡಲಾಗುವುದು’ ಎಂದರು.

‘ಇಂಥ ಘಟನೆ ನಡೆಯಬಾರದಿತ್ತು. ದುರದೃಷ್ಟಕರ ಘಟನೆ. ಯಾರೂ ಇಂಥ ಘಟನೆಯನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ಸಹಿಸುವ ಪ್ರಶ್ನೆಯೂ ಇಲ್ಲ. ಆ ಕಾರ್ಖಾನೆಯ ವಿರುದ್ಧ ದಾಳಿ ನಡೆಸಿ ಅದರ ಆಸ್ತಿ ನಷ್ಟಕ್ಕೆ ಕಾರಣವಾಗಿರುವ ಕಾರ್ಮಿಕರೇ ಇರಲಿ, ಇನ್ನು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಇಡೀ ಘಟನೆಗೆ ಕಾರಣವೇನು? ಕಾರ್ಮಿಕರು ಯಾಕೆ ಆಕ್ರೋಶಕ್ಕೆ ಒಳಗಾದರು? ಬೆಳಿಗ್ಗೆ ಪಾಳಿ ಬದಲಾವಣೆ ಹೊತ್ತಿನಲ್ಲಿ ಸೃಷ್ಟಿಯಾದ ಪರಿಸ್ಥಿತಿ ಏನು? ಯಾರಾದರೂ ಪ್ರಚೋದನೆ ಮಾಡಿದ್ದರಾ ಎಂಬಿತ್ಯಾದಿ ಸಂಗತಿಗಳ ಬಗ್ಗೆಯೂ ವಿಚಾರಣೆ ಮತ್ತು ತನಿಖೆ ನಡೆಯುತ್ತಿದೆ’ ಎಂದೂ ಅವರು ಎಂದು ಹೇಳಿದರು.

‘ಕಾರ್ಮಿಕರಿಗೆ ವೇತನ ನೀಡಿಲ್ಲ ಅಥವಾ ವೇತನ ಕಡಿತ ಮಾಡಿ ನೀಡಲಾಗುತ್ತಿತ್ತು ಎಂಬ ಅಂಶಗಳ ಬಗ್ಗೆಯೂ ವಿಚಾರಣೆ ನಡೆಸಲಾಗುವುದು. ಕಾರ್ಮಿಕರಿಗೆ ಅಂಥ ಸಮಸ್ಯೆ ಇದ್ದರೆ ಕಾರ್ಮಿಕ ಆಯುಕ್ತರಿಗೆ ದೂರು ನೀಡಬಹುದಿತ್ತು ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದಿತ್ತು. ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ಕಾನೂನನ್ನು ಕೈಗೆತ್ತಿಕೊಳ್ಳುವ ಇಂಥ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.