ಬೆಂಗಳೂರು: ರಾಜ್ಯದ ಕೆಲವು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮಾನವ ಮೃತದೇಹಗಳ ಕೊರತೆ ಎದುರಿಸುತ್ತಿವೆ. ಇದರಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ತೊಡಕಾಗುತ್ತಿದೆ.
ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ನಿಯಮಾವಳಿ ಪ್ರಕಾರ ತಲಾ 25 ವಿದ್ಯಾರ್ಥಿಗಳಿಗೆ ಒಂದು ಮಾನವ ಮೃತದೇಹ ಅಗತ್ಯ. ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್‌ಎಂಸಿ) ನಿಯಮಾವಳಿ ಪ್ರಕಾರ ಒಂದು ಮೃತದೇಹಕ್ಕೆ ತಲಾ 10 ವಿದ್ಯಾರ್ಥಿಗಳನ್ನು ಗೊತ್ತುಪಡಿಸಲು ಅವಕಾಶವಿದೆ. ಎಂಸಿಐ ನಿಯಮಾವಳಿ ಅನ್ವಯ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ 300ಕ್ಕೂ ಅಧಿಕ ಮಾನವ ಮೃತದೇಹಗಳ ಅಗತ್ಯವಿದೆ. ಆದರೆ, ಇಷ್ಟು ಸಂಖ್ಯೆಯಲ್ಲಿ ಮೃತದೇಹಗಳು ಲಭ್ಯವಾಗುತ್ತಿಲ್ಲ.
ಎಂಬಿಬಿಎಸ್ ಪದವಿ ಕೋರ್ಸ್‌ಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಥಮ ವರ್ಷಕ್ಕೆ 3,500 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಎಂಬಿಬಿಎಸ್ ಪದವಿಯಲ್ಲಿ ಶರೀರ ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಬೇಕಿದೆ. ಅದಕ್ಕಾಗಿ ನಿಗದಿತ ಸಂಖ್ಯೆಯಲ್ಲಿ ಮೃತದೇಹಗಳನ್ನು ಒದಗಿಸಬೇಕಾಗುತ್ತದೆ. ಎಂಸಿಐ ಪ್ರಕಾರ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಸಾರ ತಲಾ 10–15 ಮೃತ ದೇಹಗಳು ಅಗತ್ಯವಿದೆ. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೃತ ದೇಹಗಳು ದೊರೆಯುತ್ತಿಲ್ಲ. ವಾರ್ಷಿಕ 301 ಮೃತದೇಹಗಳು ಅಗತ್ಯವಿದ್ದು, ಸ್ವೀಕರಿಸುತ್ತಿರುವ ದೇಹಗಳ ಸಂಖ್ಯೆ 200ರ ಗಡಿಯ ಆಸುಪಾಸಿನಲ್ಲಿದೆ. 93 ಮೃತ ದೇಹಗಳ ಕೊರತೆ ಎದುರಾಗುತ್ತಿದೆ.
10 ಕಡೆ ಕೊರತೆ: ರಾಜ್ಯದಲ್ಲಿನ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 10 ಕಾಲೇಜುಗಳು ಮೃತದೇಹಗಳ ಕೊರತೆ ಎದುರಿಸುತ್ತಿವೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯು 10 ಹಾಗೂ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳ ಕೊರತೆ ಎದುರಿಸುತ್ತಿವೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಸೇರಿ ಕೆಲ ವೈದ್ಯಕೀಯ ಕಾಲೇಜುಗಳಿಗೆ ಎಂಸಿಐ ಗೊತ್ತುಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಂಸ್ಥೆಯಲ್ಲಿ ಮೃತದೇಹಗಳು ಲಭ್ಯವಾಗುತ್ತಿವೆ. ಬಿಎಂಸಿಆರ್‌ಐಗೆ ಎಂಸಿಐ ಪ್ರಕಾರ 10 ದೇಹಗಳು ಅಗತ್ಯವಿದೆ. ಸಂಸ್ಥೆಯಡಿ ವಿಕ್ಟೋರಿಯಾ ಸೇರಿ ವಿವಿಧ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಇಲ್ಲಿ ವಾರ್ಷಿಕ 20ಕ್ಕೂ ಅಧಿಕ ದೇಹಗಳನ್ನು ದಾನವಾಗಿ ಪಡೆಯಲಾಗುತ್ತಿದೆ.
‘ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನ ಮಹತ್ವದ್ದಾಗಿದೆ. ಮೃತ ದೇಹದ ಮೂಲಕ ಮನುಷ್ಯನ ದೇಹ ರಚನೆ, ಅಂಗಾಂಗಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ರೋಗಗಳಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಅಧ್ಯಯನಕ್ಕೂ ಸಹಕಾರಿಯಾಗಲಿದೆ. ವ್ಯಕ್ತಿಗಳು ದೇಹ ದಾನದ ಪ್ರತಿಜ್ಞೆ ಕೈಗೊಂಡಿದ್ದರೂ ಮೃತರ ಕುಟುಂಬಸ್ಥರು ದೇಹಗಳನ್ನು ಹಸ್ತಾಂತರ ಮಾಡದಿದ್ದರಿಂದ ಕೆಲವೆಡೆ ಕೊರತೆ ಎದುರಾಗಿದೆ. ಆಸ್ಪತ್ರೆಗಳಲ್ಲಿನ ಅನಾಥ ಶವಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಬಿಎಂಸಿಆರ್‌ಐ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಸಾಕಾರವಾಗದ ದಾನದ ಪ್ರತಿಜ್ಞೆ
ಕರ್ನಾಟಕ ಅಂಗರಚನಾ ಶಾಸ್ತ್ರ ಕಾಯ್ದೆ 1957 ಮತ್ತು ತಿದ್ದುಪಡಿ 1999ರ ನಿಯಮದಡಿ ವೈದ್ಯಕೀಯ ಶಿಕ್ಷಣ ಮತ್ತು ಶಂಶೋಧನೆಯ ಉದ್ದೇಶಕ್ಕಾಗಿ ವಿಶ್ವವಿದ್ಯಾಲಯಗಳು ಮೃತದೇಹವನ್ನು ದಾನವಾಗಿ ಪಡೆಯಬಹುದಾಗಿದೆ. ಮೃತ ದೇಹವು 6 ಗಂಟೆಗಳ ಬಳಿಕ ಕೊಳೆಯಲು ಪ್ರಾರಂಭವಾಗುತ್ತದೆ. ಆದ್ದರಿಂದ ವ್ಯಕ್ತಿ ಮೃತಪಟ್ಟ 6 ಗಂಟೆಯೊಳಗೆ ದೇಹವನ್ನು ದಾನವಾಗಿ ಪಡೆಯಬೇಕಾಗುತ್ತದೆ. ವ್ಯಕ್ತಿ ಬದುಕಿರುವಾಗಲೇ ತಮ್ಮ ದೇಹ ದಾನದ ಬಗ್ಗೆ ಸಮ್ಮತಿಯ ಉಯಿಲನ್ನು ಅಧಿಕೃತ ವೈದ್ಯಕೀಯ ಸಂಸ್ಥೆಗಳಲ್ಲಿ ನೋಂದಾಯಿಸಬಹುದು. ಅರ್ಜಿ ಸಲ್ಲಿಸದಿದ್ದಲ್ಲಿ ಮೃತ ವ್ಯಕ್ತಿಯ ದೇಹ ದಾನಕ್ಕೆ ಕುಟುಂಬಸ್ಥರು ಇಚ್ಛಿಸಿದರೆ ಅಫಿಡವಿಟ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಮರಣದ ಕಾರಣವನ್ನು ದೃಢೀಕರಿಸಿದ ಪ್ರಮಾಣಪತ್ರದೊಂದಿಗೆ ಮೃತದೇಹವನ್ನು ಹಸ್ತಾಂತರಿಸಬೇಕಾಗುತ್ತದೆ. ವ್ಯಕ್ತಿಗಳು ಜೀವಿತಾವಧಿಯಲ್ಲಿ ದಾನಕ್ಕೆ ಪ್ರತಿಜ್ಞೆ ಕೈಗೊಂಡಿದ್ದರೂ ಮರಣ ಹೊಂದಿದ ಸಂದರ್ಭದಲ್ಲಿ ಕುಟುಂಬಸ್ಥರು ವೈದ್ಯಕೀಯ ಸಂಸ್ಥೆಗಳಿಗೆ ಮಾಹಿತಿ ನೀಡದ ಪರಿಣಾಮ ದೇಹ ದಾನಕ್ಕೆ ಹಿನ್ನಡೆಯಾಗುತ್ತಿದೆ.
ಕೆಲವೆಡೆ ವೈದ್ಯಕೀಯ ಅಧ್ಯಯನ ಮತ್ತು ಸಂಶೋಧನೆಗೆ ಮಾನವ ಮೃತದೇಹಗಳ ಬದಲು, ತಂತ್ರಜ್ಞಾನ ಆಧಾರಿತ ಮಾದರಿಗಳನ್ನೂ ಬಳಸಿಕೊಳ್ಳಲಾಗುತ್ತಿದೆ.–ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.