ಸಾವು (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮಾರಣಾಂತಿಕ ರೋಗದಿಂದ ಬಳಲುತ್ತಿರುವವರಿಗೆ ಅವರ ಇಚ್ಛೆಯಂತೆ ದಯಾ ಮರಣದ ಅವಕಾಶ ಒದಗಿಸುವ ಬಗ್ಗೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಇಲಾಖೆಯು ಈ ಕ್ರಮ ಕೈಗೊಂಡಿದ್ದು, ಮರಣದ ಹಕ್ಕನ್ನು ನೀಡಿದೆ. ‘ಸಂವಿಧಾನದ 21ನೇ ವಿಧಿಯು ಘನತೆಯಿಂದ ಬದುಕುವ ಹಾಗೂ ಸಾಯುವ ಹಕ್ಕನ್ನು ಒದಗಿಸಿದೆ. ಆದ್ದರಿಂದ ರೋಗಿಯು ಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಭರವಸೆ ಇಲ್ಲದಿದ್ದರೆ, ವೈದ್ಯಕೀಯ ಚಿಕಿತ್ಸೆಯನ್ನು ನಿಲ್ಲಿಸಬಹುದು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ದಯಾ ಮರಣ ಹೊಂದುವ ಹಕ್ಕನ್ನು ನೀಡಬಹುದಾಗಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಕ್ಕನ್ನು ನೀಡುವಾಗ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಕಾರ್ಯವಿಧಾನ ಅನುಸರಿಸಬೇಕಾಗುತ್ತದೆ. ಚಿಕಿತ್ಸೆ ನೀಡುವ ವೈದ್ಯರ ಅನುಮೋದನೆ ಪಡೆಯಬೇಕಾಗುತ್ತದೆ. ರೋಗಿಯು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿಗಳನ್ನು ಸಹ ಸ್ಥಾಪಿಸಬೇಕಾಗುತ್ತದೆ. ಇದರಲ್ಲಿ ತಲಾ ಮೂವರು ನೋಂದಾಯಿತ ವೈದ್ಯರು ಇರಲಿದ್ದಾರೆ. ಈ ವೈದ್ಯಕೀಯ ಮಂಡಳಿಗಳು ದಯಾ ಮರಣಕ್ಕೆ ಅವಕಾಶ ನೀಡುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಎನ್ನಲಾಗಿದೆ.
ಈ ಪ್ರಕ್ರಿಯೆಗೆ ರೋಗಿಯ ಸಹಾಯಕರ ಒಪ್ಪಿಗೆಯೂ ಬೇಕಾಗುತ್ತದೆ. ಮಂಡಳಿಗಳ ನಿರ್ಧಾರದ ಪ್ರತಿಯನ್ನು ಜಾರಿಗೊಳಿಸುವ ಮೊದಲು, ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ (ಜೆಎಂಎಫ್‌ಸಿ) ಸಲ್ಲಿಸಬೇಕು. ಜೆಎಂಎಫ್‌ಸಿ ಪ್ರತಿಗಳನ್ನು ದಾಖಲಾತಿಗಾಗಿ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಕಳುಹಿಸಲಾಗುತ್ತದೆ. ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ವೈದ್ಯಕೀಯ ಚಿಕಿತ್ಸೆಯ ಬಗ್ಗೆ ತಮ್ಮ ಇಚ್ಛೆಯನ್ನು ದಾಖಲಿಸಬಹುದಾದ ದಾಖಲೆಯಾಗಿದೆ ಎಂದು ತಿಳಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ರೋಗಿಯು ತಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡರೆ, ಅವರ ಪರವಾಗಿ ಕನಿಷ್ಠ ಇಬ್ಬರನ್ನು ನಾಮನಿರ್ದೇಶನ ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.