ADVERTISEMENT

ದಿನಗೂಲಿ ನೌಕರರು ತುಟ್ಟಿಭತ್ಯೆಗೆ ಅರ್ಹರು

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 19:12 IST
Last Updated 12 ಜೂನ್ 2021, 19:12 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಕರ್ನಾಟಕ ದಿನಗೂಲಿ ನೌಕರರ ಕಲ್ಯಾಣ ಕಾಯ್ದೆ–2012ರ ಅಡಿಯಲ್ಲಿ ಬರುವ ದಿನಗೂಲಿ ನೌಕರರು ಶೇ 100ರಷ್ಟು ತುಟ್ಟಿಭತ್ಯೆ (ಡಿ.ಎ) ಮತ್ತು ಗಳಿಕೆ ರಜೆ(ಇ.ಎಲ್‌) ಪಡೆಯಲು ಅರ್ಹರು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಉತ್ತಮ ವೇತನ, ಸಾಮಾಜಿಕ ಭದ್ರತೆ ನೀಡುವುದು ಈ ಕಾಯ್ದೆಯ ಮೂಲ ಉದ್ದೇಶ. ಅದನ್ನು ಸಡಿಲಗೊಳಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.

‘ಈ ಕಾಯಿದೆಯಡಿ ಖಾತರಿಪಡಿಸಿದ ತುಟ್ಟಿಭತ್ಯೆಯನ್ನು 2014ರಲ್ಲಿ ಶೇ 75ಕ್ಕೆ ಮೊಟಕುಗೊಳಿಸಲಾಯಿತು. ಬಳಿಕ 2020ರ ಜನವರಿ 1ರಂದು ಮತ್ತೊಂದು ಆದೇಶದ ಮೂಲಕ ಶೇ 90ಕ್ಕೆ ಏರಿಸಲಾಯಿತು. ಇದಕ್ಕೂ ಮುನ್ನ ಜುಲೈ 2017ರಲ್ಲಿ ಸುತ್ತೋಲೆ ಹೊರಡಿಸಿ ಉದ್ಯೋಗಿಗಳಿಗೆ ಗಳಿಕೆ ರಜೆ ನಿರಾಕರಿಸಲಾಗಿದೆ. ಈ ಎರಡು ಆದೇಶಗಳು ಕಾಯ್ದೆಗೆ ವಿರುದ್ಧವಾಗಿವೆ’ ಎಂದು ಆರೋಪಿಸಿ ದಿನಗೂಲಿ ನೌಕರರ ಸಂಘಟನೆಗಳು ಅರ್ಜಿ ಸಲ್ಲಿಸಿದ್ದವು.

ADVERTISEMENT

‘ಕಾಯ್ದೆಯಲ್ಲಿರುವ ಅಂಶಗಳನ್ನು ಸರ್ಕಾರಿ ಆದೇಶದ ಮೂಲಕ ಮೊಟಕುಗೊಳಿಸಲು ಆಗುವುದಿಲ್ಲ. ನೌಕರರಿಗೆ ಸಿಗಬೇಕಾದ ಶೇ 100ರಷ್ಟು ತುಟ್ಟಿಭತ್ಯೆ ನೀಡಬೇಕು. ಈ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು ಆರು ತಿಂಗಳೊಳಗೆ ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು’ ಎಂದು ಪೀಠ ತಿಳಿಸಿತು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.