ದಿನೇಶ್ ಗುಂಡೂರಾವ್
– ಪ್ರಜಾವಾಣಿ ಚಿತ್ರ
ಬೆಂಗಳೂರು: ಬಳ್ಳಾರಿ, ದಾವಣಗೆರೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನವಜಾತ ಶಿಶುಗಳು ಹಾಗೂ ಬಾಣಂತಿಯರ ಸಾವಿನ ಆರೋಪಗಳ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಗುರಿಯಾಗಿಸಿ ರಾಜ್ಯ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಇಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ಬಿಜೆಪಿ, ಸಚಿವ ದಿನೇಶ್ ಗುಂಡೂರಾವ್ ಅವರು ನಿರ್ಲಕ್ಷ್ಯ, ಉದಾಸೀನತೆಯಲ್ಲಿ ಮೈಮರೆತ ಪರಿಣಾಮ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಸಾವಿನ ಕೂಪಗಳಾಗಿವೆ ಎಂದು ಆರೋಪಿಸಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆ ಬಿಮ್ಸ್‌ನಲ್ಲಿ ಐವರ ಬಾಣಂತಿಯರ ಸಾವು, ದಾವಣಗೆರೆಯಲ್ಲಿ ಹಸುಗೂಸುಗಳ ಸರಣಿ ಸಾವು, ಬೆಳಗಾವಿ, ಬೆಂಗಳೂರಿನ ಆಸ್ಪತ್ರೆಯಲ್ಲಿ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೂ ಕಟುಕ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಟೀಕಿಸಿದೆ.
ಬೆಂಕಿ ಬಿದ್ದಾಗ ಶೌರ್ಯ ಪ್ರದರ್ಶಿಸುವ ಸಿದ್ದರಾಮಯ್ಯನವರೇ, ಘಟನೆ ಸಂಬಂಧ ಬರೀ ವರದಿ ಪಡೆದರೆ ಸಾಲದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರು ಕಳುಹಿಸದಂತೆ ಕ್ರಮವಹಿಸಿ, ಸರ್ಕಾರಿ ಆಸ್ಪತ್ರೆಗಳಿಗೆ ಅತ್ಯಾಧುನಿಕ ಸೌಲಭ್ಯ ಒದಗಿಸಿ, ಅಮಾಯಕರ ಪ್ರಾಣ ಉಳಿಸಿ ಜೊತೆಗೆ ತಮಗೂ, ಇಲಾಖೆಗೂ ಸಂಬಂಧವಿಲ್ಲದಂತಿರುವ ಆರೋಗ್ಯ ಸಚಿವರಿಗೆ ಜವಾಬ್ದಾರಿ, ಕರ್ತವ್ಯದ ಪಾಠ ಮಾಡಿ ಎಂದು ಎಚ್ಚರಿಸಿದೆ.
ಬಳ್ಳಾರಿ, ದಾವಣಗೆರೆ, ವಿಜಯನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಚ್ಚರಿ ಎನ್ನುವಂತೆ ನವಜಾತ ಶಿಶುಗಳು ಹಾಗೂ ಬಾಣಂತಿಯರ ಸಾವಿನ ಸಂಖ್ಯೆ ಹೆಚ್ಚುತ್ತಿವೆ ಎಂದು ಮಾಧ್ಯಮಗಳ ವರದಿ ಹೇಳಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.