ತಹಶೀಲ್ದಾರ್ ಜಕ್ಕನಗೌಡರ್
ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಹಶೀಲ್ದಾರ್ ಜಿ.ಬಿ. ಜಕ್ಕನಗೌಡರ್ (54) ಅವರ ಮೃತದೇಹವು ನಗರದ ಲಾಡ್ಜ್‌ವೊಂದರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ವೈಭವ್ ಲಾಡ್ಜ್‌ನ ಕೊಠಡಿಯಲ್ಲಿ ಬುಧವಾರ ರಾತ್ರಿ ಮೃತದೇಹ ಪತ್ತೆಯಾಗಿದೆ.
ನ್ಯಾಯಾಲಯದ ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ವೈಭವ್ ಲಾಡ್ಜ್‌ನಲ್ಲಿ ಉಳಿದಿದ್ದರು. ಮಂಗಳವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಅವರು ಸಿಕ್ಕಿರಲಿಲ್ಲ.
ನಂತರ ಮೊಬೈಲ್ ಲೊಕೇಶನ್ ಪರಿಶೀಲನೆ ನಡೆಸಿದಾಗ ಮೆಜೆಸ್ಟಿಕ್ ಸಮೀಪ ತೋರಿಸುತ್ತಿತ್ತು. ಅದನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ವೈಭವ್ ಲಾಡ್ಜ್ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಠಡಿ ಬಾಗಿಲು ಹಾಕಿತ್ತು. ಪೊಲೀಸರು ಬಾಗಿಲು ತೆರೆದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಪ್ರತಿಕ್ರಿಯೆ
ಶಿವಮೊಗ್ಗ: 'ಜಕ್ಕನಗೌಡರ್ ಯಾವ ವಸತಿ ಗೃಹದಲ್ಲಿ ತಂಗಿದ್ದರು ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಅವರ ಕುಟುಂಬದವರು ಸಂಪರ್ಕಕ್ಕೆ ಸಿಕ್ಕಿಲ್ಲ. ಶವ ಪರೀಕ್ಷೆಯ ನಂತರ ಅವರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಗುರುವಾರ ಶವ ಪರೀಕ್ಷೆಯ ನಂತರ ಕುಟುಂಬದವರು ಪಾರ್ಥೀವ ಶರೀರವನ್ನು ಗದುಗಿಗೆ ಕೊಂಡೊಯ್ಯಲಿದ್ದಾರೆ' ಎಂಬ ಮಾಹಿತಿ ಇದೆ' ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.
ಜಕ್ಕನಗೌಡರ್ ಮೂಲತಃ ಗದಗ ಜಿಲ್ಲೆಯವರು. ಕಳೆದೊಂದು ವರ್ಷದಿಂದ ತೀರ್ಥಹಳ್ಳಿ ತಹಶಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.