ADVERTISEMENT

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ: ಆರೋಪಿ ಜಾಮೀನು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 21 ಮೇ 2022, 13:27 IST
Last Updated 21 ಮೇ 2022, 13:27 IST
   

ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ರೆಹಮತ್‌–ಉಲ್ಲಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 67ನೇ ಸಿಸಿಎಚ್ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

‘ಹಿಜಾಬ್ ವಿಚಾರವಾಗಿ ನ್ಯಾಯಮೂರ್ತಿಗಳು ತೀರ್ಪು ನೀಡಿದ್ದರು. ಅದನ್ನು ವಿರೋಧಿಸಿದ್ದ ತಮಿಳುನಾಡಿನ ತೌಹೀದ್ ಜಮಾತ್ (ಟಿ.ಎನ್‌.ಟಿ.ಜೆ) ಮುಸ್ಲಿಂ ಸಂಘಟನೆ ಮುಖಂಡ ಆರ್. ರಹಮತ್‌–ಉಲ್ಲಾ, ಮಾರ್ಚ್ 17ರಂದು ಮಧುರೈನಲ್ಲಿ ನಡೆದ ಸಮಾವೇಶದಲ್ಲಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆಯೊಡ್ಡಿದ್ದ. ವಿಡಿಯೊ ಆಧರಿಸಿ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಮಿಳುನಾಡಿನ ಪೊಲೀಸರು ರೆಹಮತ್‌–ಉಲ್ಲಾನನ್ನು ಬಂಧಿಸಿ, ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಸದ್ಯ ಆರೋಪಿ, ನ್ಯಾಯಾಂಗ ಬಂಧನಲ್ಲಿದ್ದಾನೆ.

ADVERTISEMENT

‘ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣ ಗಂಭೀರವಾದದ್ದು. ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅರ್ಜಿ ಸಲ್ಲಿಸಿದ್ದ. ಜಾಮೀನು ನೀಡದಂತೆ ಸೂಕ್ತ ಪುರಾವೆಗಳ ಸಮೇತ ಆಕ್ಷೇಪಣೆ ಸಲ್ಲಿಸಲಾಗಿತ್ತು’ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್. ಪಾಟೀಲ ಹೇಳಿದರು.

‘ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ವಿ. ಪ್ರಕಾಶ್, ಜಾಮೀನು ತಿರಸ್ಕರಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಕೊಡಿಸಲು ನ್ಯಾಯಾಲಯದಲ್ಲಿ ಸೂಕ್ತವಾದ ಮಂಡಿಸಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.