ADVERTISEMENT

ಚಿಕಿತ್ಸೆ ಸಿಗದೆ ಸಾವು: ತನಿಖೆಗೆ ಹೈಕೋರ್ಟ್ ನಿರ್ದೇಶನ

ಮುಖ್ಯ ನ್ಯಾಯಮೂರ್ತಿ ಕಚೇರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 20:29 IST
Last Updated 26 ಆಗಸ್ಟ್ 2020, 20:29 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದ ಕಾರಣಕ್ಕೆ ತನ್ನ ಅಳಿಯನ ಸಾವು ಸಂಭವಿಸಿದೆ’ ಎಂದು ಆರೋಪಿಸಿ 70 ವರ್ಷದ ವ್ಯಕ್ತಿ ಪತ್ರ ಬರೆದಿರುವ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಅಳಿಯ ಕೆ.ಸಿ. ಚೇತನ್‌ಕುಮಾರ್ ಅವರಿಗೆ ಕೋವಿಡ್ ಹೊರತಾದ ಕಾಯಿಲೆಗೆ ಚಿಕಿತ್ಸೆ ಕೊಡಿಸಲು 15ರಿಂದ 20 ಆಸ್ಪತ್ರೆಗಳನ್ನು ಸಂಪರ್ಕಿಸಲಾಯಿತು. ಎರಡು ದಿನ ನಡೆಸಿದ ಪ್ರಯತ್ನ ವಿಫಲವಾಗಿ ಅವರು ಜುಲೈ 2ರಂದು ಮೃತಪಟ್ಟರು’ ಎಂದು ಕೋಮಲನಗರ ನಿವಾಸಿ ಚಿಕ್ಕನರಸಿಂಹಯ್ಯ ಅವರು ಮುಖ್ಯ ನ್ಯಾಯಮೂರ್ತಿ ಅವರ ಕಚೇರಿಗೆ ಪತ್ರ ಬರೆದಿದ್ದಾರೆ.

‘ಕೋವಿಡ್ ಪರೀಕ್ಷೆ ಮಾಡಿಸದೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ, ಪರೀಕ್ಷಾ ಕಿಟ್‌ ಇಲ್ಲ ಎಂಬ ನೆಪ ಹೇಳಿ ಹಲವು ಆಸ್ಪತ್ರೆಗಳವರು ವಾಪಸ್ ಕಳುಹಿಸಿದ್ದರು. ಕೋವಿಡ್‌ ಪರೀಕ್ಷೆಗಾಗಿ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸ್ ಸಿಬ್ಬಂದಿಗೆ ಮಾತ್ರ ಈ ದಿನ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದ ಅಲ್ಲಿಯ ಸಿಬ್ಬಂದಿ ವಾಪಸ್ ಕಳುಹಿಸಿದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಕೊನೆಗೆ ₹5,100 ಪಾವತಿಸಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಕೋವಿಡ್ ಪರೀಕ್ಷೆಗಾಗಿ ಗಂಟಲ ದ್ರವ ನೀಡಲಾಯಿತು. ತೀವ್ರ ನಿಗಾ ಘಟಕ ಲಭ್ಯ ಇದೆ ಎಂಬ ಮಾಹಿತಿ ತಿಳಿದು ನೆಲಮಂಗಲಕ್ಕೆ ಕರೆದೊಯ್ಯಲಾಯಿತು. ಕೃತಕ ಉಸಿರಾಟದ ಅವಶ್ಯ ಇದೆ ಎಂದು ತಿಳಿಸಿದ ವೈದ್ಯರು, ಈ ಆಸ್ಪತ್ರೆಯಲ್ಲಿ ಅದು ಲಭ್ಯವಿಲ್ಲ ಎಂದರು. ಮತ್ತೊಂದು ಆಸ್ಪತ್ರೆ ಹುಡುಕಿ ದಾಖಲಿಸಿದ ಸ್ವಲ್ಪ ಹೊತ್ತಿನಲ್ಲೇ ಅವರು ಕೊನೆಯುಸಿರೆಳೆದರು. ಅವರು ಕೋವಿಡ್‌ ಪಾಸಿಟಿವ್ ಎಂದು ತಿಳಿಸಿದ್ದರು. ಆದರೆ, ಮರು ದಿನ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂತು’ಎಂದು ವಿವರಿಸಿದ್ದಾರೆ.

‘ಪತ್ರದಲ್ಲಿ ಹೇಳಿರುವ ಅಂಶಗಳು ಸರಿಯಾಗಿದ್ದರೆ, ಅದು ಆಘಾತಕಾರಿ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅವರು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರು.

ಆರ್ಥಿಕ ಬಿಕ್ಕಟ್ಟು: ಪರಿಹಾರ ಮೊತ್ತ ಹೆಚ್ಚಳಕ್ಕೆ ನಕಾರ

ಕೋವಿಡ್‌ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಸರ್ಕಾರಿ ನೌಕರನ ಕುಟುಂಬಕ್ಕೆ ₹30 ಲಕ್ಷ ಪರಿಹಾರ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ನಿರಾಕರಿಸಿರುವ ರಾಜ್ಯ ಸರ್ಕಾರ,ಹಣಕಾಸಿನ ಬಿಕ್ಕಟ್ಟಿನ ಕಾರಣವನ್ನು ಹೈಕೋರ್ಟ್‌ಗೆ ತಿಳಿಸಿದೆ.

ಆರೋಗ್ಯ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ₹50 ಲಕ್ಷ ವಿಮಾ ಯೋಜನೆಗೆ ಸಮನಾಗಿ ಪರಿಹಾರ ನೀಡುವ ಸಾಧ್ಯತೆ ಬಗ್ಗೆ ಪರಿಗಣಿಸುವಂತೆ ಹೈಕೋರ್ಟ್‌ ಹೇಳಿತ್ತು.

‘ಆರೋಗ್ಯ ಕಾರ್ಯಕರ್ತರನ್ನು ಬಿಟ್ಟು ಬೇರೆ ಕೆಲಸ ಮಾಡುವ ಎಲ್ಲರಿಗೂ ರಾಜ್ಯ ಸರ್ಕಾರ ₹30 ಲಕ್ಷ ಪರಿಹಾರ ನೀಡುತ್ತಿದೆ’ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.