ADVERTISEMENT

‘ಬಯಲಿನ ದೇವರನ್ನು ಆಲಯದಲ್ಲಿ ಬಂಧಿಸಿದರು’

‘ಚರಿತ್ರೆಯ ಅಬ್ರಾಹ್ಮಣೀಕರಣ’ ಬಿಡುಗಡೆ ಕಾರ್ಯಕ್ರಮದಲ್ಲಿ ಬಂಜಗೆರೆ ಜಯಪ್ರಕಾಶ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 18:43 IST
Last Updated 23 ಫೆಬ್ರುವರಿ 2019, 18:43 IST
ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಿ ಅನುವಾದಕಿ ಎ.ರೀಟಾ ರೀನಿ ಅವರಿಗೆ ನೀಡಿದರು. ಎಂ.ಎಸ್‌.ಆಶಾದೇವಿ, ಕಲಾ ಕಾಲೇಜಿನ ಪ್ರಾಂಶುಪಾಲ ಎಸ್‌.ಜಿ.ಮೂರ್ತಿ, ನಾವೇ ಕರ್ನಾಟಕ ಸಂಘಟನೆ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ ಇದ್ದರು– ಪ್ರಜಾವಾಣಿ ಚಿತ್ರ
ಬಂಜಗೆರೆ ಜಯಪ್ರಕಾಶ್ ಪುಸ್ತಕ ಬಿಡುಗಡೆ ಮಾಡಿ ಅನುವಾದಕಿ ಎ.ರೀಟಾ ರೀನಿ ಅವರಿಗೆ ನೀಡಿದರು. ಎಂ.ಎಸ್‌.ಆಶಾದೇವಿ, ಕಲಾ ಕಾಲೇಜಿನ ಪ್ರಾಂಶುಪಾಲ ಎಸ್‌.ಜಿ.ಮೂರ್ತಿ, ನಾವೇ ಕರ್ನಾಟಕ ಸಂಘಟನೆ ಅಧ್ಯಕ್ಷ ಪಾರ್ವತೀಶ ಬಿಳಿದಾಳೆ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಯಜಮಾನಿಕೆ ಸಾಧಿಸಬೇಕು ಎಂಬಬ್ರಾಹ್ಮಣ್ಯ ಮನಸ್ಥಿತಿಯ ವರ್ಗವು ಬಯಲಿನಲ್ಲಿದ್ದ ದೇವರುಗಳನ್ನು ಆಲಯಗಳಲ್ಲಿ ಬಂಧಿಸಿ ಇಟ್ಟಿದೆ’ ಎಂದು ಲೇಖಕ ಬಂಜಗೆರೆ ಜಯಪ್ರಕಾಶ್‌ ಅಭಿಪ್ರಾಯಪಟ್ಟರು.

ಟಿಇಡಿಎಸ್‌ ಪ್ರಕಾಶನ ಮತ್ತು ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಚರಿತ್ರೆಯ ಅಬ್ರಾಹ್ಮಣೀಕರಣ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳಿಂದಲೂ ದೇವರ ಮೂರ್ತಿಗಳು ಬಯಲಿನಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದವು. ಆ ದೈವಗಳ ಪಾದಗಳಿಗೆ ಸಾಮಾನ್ಯರು, ಶ್ರೀಮಂತರು ಸುಲಭವಾಗಿ ಹಣೆಹಚ್ಚಿ ನಮಸ್ಕಾರ ಮಾಡಬಹುದಿತ್ತು. ಆದರೆ, ಅವುಗಳ ಸುತ್ತ ಕ್ರಮೇಣ ಗೋಡೆಗಳನ್ನು ಕಟ್ಟಿ, ಭದ್ರವಾದ ಬಾಗಿಲುಗಳನ್ನು ಜೋಡಿಸಿ, ಪುರೋಹಿತನೆಂಬ ಕಾವಲುಗಾರರನ್ನು ನೇಮಿಸಲಾಯಿತು. ಇದರಿಂದ ವರಮಾನ ಗಳಿಸುವ ಪ್ರವೃತ್ತಿ ಬೆಳೆಯಿತು’ ಎಂದು ಅವರು ವಿವರಿಸಿದರು.

ADVERTISEMENT

‘ಪೂಜೆ ಮಾಡುವುದು ಬ್ರಾಹ್ಮಣರ ಪದ್ಧತಿಯಲ್ಲ. ಹೋಮ–ಹವನ ಮಾಡುವುದು ಅವರ ಪದ್ಧತಿ. ದಕ್ಷಿಣ ಭಾರತದವರಿಂದ ಪೂಜಾ ವಿಧಾನವನ್ನು ಅವರು ಪಡೆದರು. ಪೂಜೆ ಎಂಬ ಪದ ತಮಿಳಿನ ‘ಪೂ’ ಎಂಬ ಪದದಿಂದ ಹುಟ್ಟಿದೆ. ‘ಪೂ’ ಎಂದರೆ ಹೂವು ಎಂದರ್ಥ’ ಎಂದು ತಿಳಿಸಿದರು.

‘ಬ್ರಾಹ್ಮಣ್ಯತನವು ಸತ್ಯ ಪರಂಪರೆಯನ್ನು ವಿರೂಪಗೊಳಿಸಿದ ಬಗೆ, ಮಾನವೀಯ ಅನುಭೂತಿ ಹೊಂದಿರುವ ಚರಿತ್ರೆಯನ್ನು ತಿರುಚಿದನ್ನು ಈ ಪುಸ್ತಕದಲ್ಲಿ ತುಂಬಾ ಚೆನ್ನಾಗಿ ನಿರೂಪಿಸಲಾಗಿದೆ’ ಎಂದರು.

ವಿಮರ್ಶಕಿ ಎಂ.ಎಸ್‌.ಆಶಾದೇವಿ, ‘ನೇಪಥ್ಯಕ್ಕೆ ತಳ್ಳಲಾದ ಚರಿತ್ರೆಯನ್ನು ಮರುನಿರೂಪಣೆ ಮಾಡುವ ಪ್ರಯತ್ನ ಈ ಪುಸ್ತಕದಲ್ಲಿದೆ. ಇದು ಈವರೆಗಿನ ಸಂಸ್ಕೃತಿ ರಚನೆಯ ಮಾದರಿಗಳನ್ನು ಸಕಾರಣವಾಗಿ ತಿರಸ್ಕಾರ ಮಾಡುತ್ತದೆ. ಪ್ರಸ್ತುತ ವೈವಿಧ್ಯ ಸಂಸ್ಕೃತಿ ಹೇಗೆ ನಾಶವಾಗುತ್ತಿದೆ ಎಂಬುದನ್ನೂ ಪುಸ್ತಕದಲ್ಲಿ ಸೇರಿಸಬಹುದಿತ್ತು’ ಎಂದು ಹೇಳಿದರು.

*

ಹಸುವಿನ ಹಾಲು, ಗಂಜಲ ಶ್ರೇಷ್ಠವಾದರೆ, ಅದರ ಮಾಂಸವೂ ಶ್ರೇಷ್ಠವಾಗಬೇಕಿತಲ್ಲ. ಅದೇಕೆ ಕನಿಷ್ಠವಾಯಿತು?

-ಆರ್‌.ಕಾವಲಮ್ಮ, ಪ್ರಾಧ್ಯಾಪಕಿ, ಕಲಾ ಕಾಲೇಜು

*

ಪುಸ್ತಕದ ಕುರಿತು

ಪುಸ್ತಕ: ಚರಿತ್ರೆಯ ಅಬ್ರಾಹ್ಮಣೀಕರಣ(ಅನುವಾದ: ಎ.ರೀಟಾ ರೀನಿ)

ಮೂಲ: ಡಿಬ್ರಾಹ್ಮಣೈಜಿಂಗ್‌ ಹಿಸ್ಟ್ರಿ (ಬ್ರಜ್‌ ರಂಜನ್‌ ಮಣಿ)

ಬೆಲೆ: ₹ 450

ಪುಟಗಳು: 528

ಪ್ರಕಾಶನ: ಟಿಇಡಿಎಸ್‌ ಪಬ್ಲಿಕೇಷನ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.