ADVERTISEMENT

ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ನಿರ್ಧಾರ: ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 14:05 IST
Last Updated 12 ಜುಲೈ 2021, 14:05 IST
ಸಚಿವ ಕೆ.ಸಿ.ನಾರಾಯಣಗೌಡ
ಸಚಿವ ಕೆ.ಸಿ.ನಾರಾಯಣಗೌಡ   

ಮಂಡ್ಯ: ‘ಕೆಆರ್‌ಎಸ್‌ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಪಾಂಡವಪುರ ತಾಲ್ಲೂಕು ಬೇಬಿಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸೋಮವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜಲಾಶಯದ ಸುತ್ತಮತ್ತ ಗಣಿಗಾರಿಕೆ ನಿಷೇಧಿಸಲು ಅವಕಾಶವಿದೆ, ದೇಶದ ವಿವಿಧೆಡೆ ಅಣೆಕಟ್ಟೆಗಳ ಸುತ್ತ ಗಣಿಗಾರಿಕೆ ನಿಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ. ಅಗತ್ಯಬಿದ್ದರೆ ಬೇಬಿಬೆಟ್ಟದಲ್ಲಿ ಕಾನೂನಾತ್ಮಕವಾಗಿ ಅನುಮತಿ ಪಡೆದು ಚಟುವಟಿಕೆ ನಡೆಸುತ್ತಿರುವ ಮಾಲೀಕರಿಗೆ ಪರ್ಯಾಯವಾಗಿ ಬೇರೆ ಜಾಗ ನೀಡಲಾಗುವುದು’ ಎಂದರು.

‘ಜಲಾಶಯದ ಸುತ್ತಮುತ್ತಲಿನ ಗಣಿಗಾರಿಕೆ ವಿಚಾರ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರಿಂದ ಜಲಾಶಯಕ್ಕೆ ಧಕ್ಕೆ ಎಂಬ ಉಂಟಾಗಲಿದೆ ಮಾಹಿತಿಯೂ ಇದೆ. ಶಾಶ್ವತವಾಗಿ ಗಣಿ ಚಟುವಟಿಕೆ ಸ್ಥಗಿತಗೊಳಿಸಬೇಕು ಎಂಬ ಕೂಗಿದೆ. ಇದನ್ನು ಪರಿಗಣಿಸಿ ನಿಷೇಧಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.