ADVERTISEMENT

ಹೊಸ ಶಾಲೆಗಳನ್ನು ಆರಂಭಿಸುವ ನಿರ್ಧಾರ: ಡಿಡಿಪಿಐಗೆ ಸಂಪೂರ್ಣ ಅಧಿಕಾರ

ಮಾನ್ಯತೆಗೆ ತಪ್ಪು ಮಾಹಿತಿ ನೀಡಿದರೆ ಕ್ರಿಮಿನಲ್ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 20:19 IST
Last Updated 18 ಫೆಬ್ರುವರಿ 2023, 20:19 IST
   

ಬೆಂಗಳೂರು: ಯಾವುದೇ ಭಾಷಾ ಮಾಧ್ಯಮದ ಹೊಸ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡುವ ಅಧಿಕಾರವನ್ನು ಆಯಾ ಜಿಲ್ಲೆಗಳ ಉಪ ನಿರ್ದೇಶಕರಿಗೆ (ಡಿಡಿಪಿಐ) ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಹೊಸ ಶಾಲೆಗಳ ನೋಂದಣಿ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಇದುವರೆಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಒಂದರಿಂದ ಎಂಟನೇ ತರಗತಿಯವರೆಗಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಡಿಡಿಪಿಐ ಅನುಮತಿ ನೀಡುತ್ತಿದ್ದರು. ಪ್ರೌಢಶಾಲಾ ತರಗತಿಗಳು ಹಾಗೂ ಕನ್ನಡ ಮಾಧ್ಯಮ ಹೊರತುಪಡಿಸಿ, ಇತರೆ ಮಾಧ್ಯಮಗಳಲ್ಲಿ ಯಾವುದೇ ಶಾಲೆ ಆರಂಭಿಸಬೇಕಿದ್ದರೆ ಶಿಕ್ಷಣ ಇಲಾಖೆಯ ಆಯುಕ್ತರ ಅನುಮತಿ ಪಡೆಯಬೇಕಿತ್ತು.

‘ಆಂಗ್ಲ ಮಾಧ್ಯಮ ಶಾಲೆಗಳ ಆರಂಭಕ್ಕೆ ಅನುಮತಿಗಾಗಿ ಬೆಂಗಳೂರಿನಲ್ಲಿರುವ ಆಯುಕ್ತರ ಕಚೇರಿಗೆ ಅಲೆಯಬೇಕು. ಇದು ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ ಎಂದು ಪ್ರಧಾನಮಂತ್ರಿಗೆ ಬರೆದಿದ್ದ ಪತ್ರದಲ್ಲಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸ) ಆರೋಪಿಸಿತ್ತು. ನಂತರ ಇಲಾಖೆಯು ನಿಯಮ ಸರಳಗೊಳಿಸಲು ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ಆರಂಭಿಸಿತ್ತು.

ADVERTISEMENT

ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅನುಮತಿ ನೀಡುವ ಅಧಿಕಾರ ಈಗಲೂ ಬಿಇಒಗಳಿಗೆ ನೀಡಲಾಗಿದೆ. ಒಂದರಿಂದ 10ನೇ ತರಗತಿಯವರೆಗಿನ ಶಾಲೆಗಳ ಆರಂಭಕ್ಕೆ ಡಿಡಿಪಿಐ ಅನುಮತಿ ನೀಡಲಿದ್ದಾರೆ. ಸಿಬಿಎಸ್‌ಸಿ, ಐಸಿಎಸ್‌ಸಿಗೆ ಅನುಮತಿ ಪಡೆಯಲು ಶಿಕ್ಷಣ ಇಲಾಖೆ ನೀಡುವ ನಿರಪೇಕ್ಷಣಾ ಪತ್ರದ ಮಾನ್ಯತಾ ಅವಧಿ ಮೂರು ವರ್ಷಗಳಿಗೆ ಇತ್ತು. ಹೊಸ ನಿಯಮದ ಅನ್ವಯ ಅದನ್ನು ಎರಡು ವರ್ಷಗಳಿಗೆ ಮಿತಿಗೊಳಿಸಲಾಗಿದೆ. ಶಾಲಾ ಮಾನ್ಯತೆ ಪಡೆಯುವಾಗ ತಪ್ಪು ಮಾಹಿತಿ, ನಕಲಿ ದಾಖಲೆಗಳನ್ನು ನೀಡಿದ್ದರೆ ಅಂಥ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.