ADVERTISEMENT

ಅರ್ಜಿ ಸಲ್ಲಿಕೆಯಲ್ಲಿ ಗಣನೀಯ ಕುಸಿತ

ಆರ್‌ಟಿಇ ಕಾಯ್ದೆಯಡಿ ಸೀಟು; 119 ಶಾಲೆಗಳಲ್ಲಿ 1,009 ಸೀಟು ಲಭ್ಯ

ಕೆ.ಓಂಕಾರ ಮೂರ್ತಿ
Published 26 ಏಪ್ರಿಲ್ 2019, 20:28 IST
Last Updated 26 ಏಪ್ರಿಲ್ 2019, 20:28 IST
.
.   

ಮೈಸೂರು: ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ 25ರಷ್ಟು ಸೀಟುಗಳಿಗೆ ಪ್ರವೇಶಾತಿ ಕೋರಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

2019–20ನೇ ಶೈಕ್ಷಣಿಕ ಸಾಲಿಗೆ ಅರ್ಜಿ ಸಲ್ಲಿಕೆಗೆ ಗಡುವು ಮುಗಿದಿದ್ದು, ಕೇವಲ 1,240 ಅರ್ಜಿಗಳು ಬಂದಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಜಿಗಳ ಸಂಖ್ಯೆಯಲ್ಲಿ ಶೇ 70ರಷ್ಟು ತಗ್ಗಿದೆ.

2018–19ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಕೋರಿ ಸುಮಾರು 9 ಸಾವಿರ ಅರ್ಜಿಗಳು ಬಂದಿದ್ದವು. ಅಲ್ಲದೇ, ಈ ಬಾರಿ ಬದಲಾಗಿರುವ ವಿದ್ಯಮಾನದಲ್ಲಿ ಈ ಕಾಯ್ದೆಯಡಿ 1,009 ಸೀಟುಗಳು ಮಾತ್ರ ಲಭ್ಯವಿವೆ. ಸೀಟು ಲಭ್ಯತೆ ಬಗ್ಗೆ ಪೋಷಕರಲ್ಲಿ ಉದ್ಭವಿಸಿರುವ ಗೊಂದಲ, ಆತಂಕ ಹಾಗೂ ಬದ ಲಾದ ನಿಯಮಗಳಿಂದಾಗಿ ಅರ್ಜಿಗಳು ಕಡಿಮೆ ಆಗಲು ಕಾರಣ ಎನ್ನಲಾಗಿದೆ.

ADVERTISEMENT

ಈ ಬಾರಿ ಅನಾಥ ಮಕ್ಕಳು–3, ವಿಶೇಷ ಮಕ್ಕಳು–11, ಪರಿಶಿಷ್ಟ ಜಾತಿ– 119, ಪರಿಶಿಷ್ಟ ವರ್ಗ– 54, ಪ್ರವರ್ಗ 1– 37, ಪ್ರವರ್ಗ 2ಎ–351 ಹಾಗೂ ಇತರೆ–665 ಅರ್ಜಿಗಳು ಸಲ್ಲಿಕೆಯಾಗಿವೆ.

‘ಸರ್ಕಾರಿ ಶಾಲೆಗಳಲ್ಲಿ ಇಲ್ಲದ ಕಡೆಯಲ್ಲಿ ಮಾತ್ರ ಆರ್‌ಟಿಇಗೆ ಅವಕಾಶ ನೀಡಲಾಗಿದೆ. ಹೀಗಾಗಿ, ಅರ್ಜಿ ಸಲ್ಲಿಕೆ ಗಣನೀಯವಾಗಿ ಕುಸಿದಿದೆ. ಸದ್ಯದಲ್ಲೇ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಆರ್‌ಟಿಇ ಅಡಿ ಮಾರ್ಚ್ 15ರಂದು ಅರ್ಜಿ ಆಹ್ವಾನಿಸಿ ಏ. 15ಕ್ಕೆ ಕೊನೆಯ ದಿನ ನಿಗದಿಪಡಿಸಲಾಗಿತ್ತು. ಆದರೆ, 25ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆನ್‌ಲೈನ್‌ ಲಾಟರಿಗಳ ಮೂಲಕ ಸೀಟು ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಕಳೆದ ಬಾರಿ ಮೂರು ಸುತ್ತುಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಸೀಟು ಕಡಿಮೆ ಇದ್ದು, ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಲಾಟರಿ ಮೊರೆ ಹೋಗಲಾಗುತ್ತದೆ.

ಖಾಸಗಿ ಶಾಲೆಗಳಲ್ಲಿ ಪ್ರತಿ ವರ್ಷ ಶಾಲೆಗೆ ದಾಖಲಾಗುವ ಒಟ್ಟಾರೆ ಮಕ್ಕಳ ಪೈಕಿ ಶೇ 25ರಷ್ಟು ಬಡ ಮಕ್ಕಳನ್ನು ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಾರ್ಷಿಕ ಶುಲ್ಕ ತುಂಬಿ ಆರ್‌ಟಿಇ ಅಡಿ ಸೀಟು ಕಲ್ಪಿಸುತ್ತದೆ.

ಆರ್‌ಟಿಇ ಅಡಿ ಜಿಲ್ಲೆಯ 119 ಖಾಸಗಿ ಶಾಲೆಗಳಲ್ಲಿ ಒಟ್ಟು 1,009 ಸೀಟುಗಳು ಲಭ್ಯ ಇವೆ. ಪರಿಶಿಷ್ಟ ಜಾತಿ–316, ಪರಿಶಿಷ್ಟ ವರ್ಗ–67 ಹಾಗೂ ಇತರೆ ವರ್ಗದವರಿಗೆ–626 ಸೀಟು ಹಂಚಿಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಮಕ್ಕಳ ಪೋಷಕರ ಮೊಬೈಲ್‌ಗೆ ಸಂದೇಶ ರವಾನೆ ಆಗುತ್ತದೆ.

ಈ ಬಾರಿ ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳು ಕಾರ್ಯನಿರ್ವಹಿಸುವ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ಸೀಟು ಪಡೆಯುವುದಕ್ಕೆ ಕೊಕ್ಕೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.