ADVERTISEMENT

ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ: ಬಹಿರಂಗ ಚರ್ಚೆಗೆ ಪಂಥಾಹ್ವಾನ

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:17 IST
Last Updated 28 ಮೇ 2025, 15:17 IST
<div class="paragraphs"><p>ರಾಧಾ ಮೋಹನ್‌ ದಾಸ್ ಅಗರವಾಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದರು.</p></div>

ರಾಧಾ ಮೋಹನ್‌ ದಾಸ್ ಅಗರವಾಲ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯಸಭಾ ಸದಸ್ಯ ಲಹರ್‌ ಸಿಂಗ್‌ ಸಿರೋಯಾ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದರು.

   

ಬೆಂಗಳೂರು: ರಾಜ್ಯ ಸರ್ಕಾರ ಬಿಜೆಪಿ ವಿರುದ್ಧ ಹಾಕಿರುವ ಮಾನನಷ್ಟ ಮೊಕದ್ದಮೆ ಕುರಿತು ಬಹಿರಂಗ ಚರ್ಚೆ ಆಯೋಜಿಸಬೇಕು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್‌ವಾಲ್‌ ಪಂಥಾಹ್ವಾನ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಯಥಾ ರಾಜ ತಥಾ ಪ್ರಜೆ’ ಎನ್ನುವಂತೆ ಕಾಂಗ್ರೆಸ್‌ ನಡವಳಿಕೆ ಇದೆ. ಕಾಂಗ್ರೆಸ್‌ ಎರಡು ವರ್ಷಗಳಲ್ಲಿ ಜನರಿಗೆ ಬೆಲೆ ಏರಿಕೆ ಬಿಟ್ಟರೆ ಬೇರೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ವಿಫಲತೆ ಕುರಿತು ರಾಜ್ಯ ಬಿಜೆಪಿ ಜಾಹೀರಾತು ನೀಡಿದೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಜನರ ಭಾವನೆಗಳನ್ನೇ ಆಧಾರವಾಗಿ ಇಟ್ಟುಕೊಂಡು ಆರೋಪ ಮಾಡಿದ್ದೇವೆ. ಈ ಕುರಿತು ಜನರಿಗೆ ಉತ್ತರ ಕೊಡುವ ಬದಲು ಮಾನನಷ್ಟ ಮೊಕದ್ದಮೆ ಮೂಲಕ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಬಹಿರಂಗ ಚರ್ಚೆ ನಡೆಸಬೇಕು. ಈ ಚರ್ಚೆ ನೇರ ಪ್ರಸಾರ ಆಗಬೇಕು ಎಂದು ಒತ್ತಾಯಿಸಿದರು. 

ADVERTISEMENT

ರಾಜ್ಯದಲ್ಲಿ ಬಿಜೆಪಿಯತ್ತ ಜನರ ಒಲವು ಹೆಚ್ಚಾಗಿದೆ. ಚುನಾವಣೆ ನಡೆದರೆ ಬಿಜೆಪಿ 150 ರಿಂದ 155 ಸೀಟುಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಲಿಲ್ಲ. ಕಾಂಗ್ರೆಸ್ ಪಕ್ಷ ಬಹುಮತ ಪಡೆದಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ, ವಿಜಯೇಂದ್ರ ಅವರ ಸ್ಥಳೀಯ ನಾಯಕತ್ವದಲ್ಲಿ ಬಿಜೆಪಿ ಮುನ್ನಡೆ ಪಡೆದಿತ್ತು. ವಿಧಾನಸಭಾ ಚುನಾವಣೆಯ ತಪ್ಪು ನಿರ್ಣಯ ಕರ್ನಾಟಕದ ಜನರಿಗೆ ಒಂದೇ ವರ್ಷದಲ್ಲಿ ಅರ್ಥವಾಗಿದೆ ಎಂದರು.

ರಾಜ್ಯದಲ್ಲಿ ಕೋಮುದ್ವೇಷ, ಕೋಮು ಗಲಭೆಗಳಿಗೆ ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ನೀತಿ, ಹಿಂದೂ ಸಮಾಜದ ಅಪಮಾನ,  ಆಕ್ರಮಣವೇ ಕಾರಣ. ತುಷ್ಟೀಕರಣಕ್ಕಾಗಿ ವಕ್ಫ್ ಮಂಡಳಿಗೆ ಭಾರಿ ಪ್ರಮಾಣದ ಜಮೀನು ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಬದಲಾಗಿ ಮುಸ್ಲಿಂ ಲೀಗ್‍, ಎಸ್‌ಡಿಪಿಐ, ಪಿಎಫ್‌ಐ ಸರ್ಕಾರ ನಡೆಸುತ್ತಿವೆ ಎಂದು ದೂರಿದರು. 

ರಾಜ್ಯ ಸರ್ಕಾರಗಳು ನಡೆಸುವ ಪರಿಶಿಷ್ಟ ಜಾತಿ ಒಳಮೀಸಲು ವರ್ಗೀಕರಣ ಸಮೀಕ್ಷೆಗೆ ಕಾನೂನು ಪ್ರಕಾರ ಮಾನ್ಯತೆ ಇಲ್ಲ. ಕೇಂದ್ರ ನಡೆಸುವ ಗಣತಿ ಹಾಗೂ ಸಮೀಕ್ಷೆಯೇ ಎಲ್ಲದಕ್ಕೂ ಪರಿಹಾರ ಎಂದರು.

ಸರ್ಕಾರದ ಪತನ ಸಾಧ್ಯತೆ
ಕಾಂಗ್ರೆಸ್‌ ಒಳಜಗಳದಿಂದ ಯಾವುದೇ ಕ್ಷಣದಲ್ಲಿ ಸರ್ಕಾರ ಬೀಳಬಹುದು. ಸಿದ್ದರಾಮಯ್ಯ ಪದತ್ಯಾಗ ಮಾಡಿದರೆ ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್, ಪ್ರಿಯಾಂಕ್ ಖರ್ಗೆ ಯಾರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಜನರು ಬಯಸುತ್ತಿದ್ದಾರೆ ಎಂದು ರಾಧಾಮೋಹನ್‌ ದಾಸ್‌ ಅಗರ್‌ವಾಲ್‌ ಹೇಳಿದರು.

ರವಿಕುಮಾರ್ ಹೇಳಿಕೆ ಸಮರ್ಥನೆ

ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ದಾಸ್‌ ಅಗರ್‌ವಾಲ್‌ ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರನ್ನು ಬಲವಾಗಿ ಸಮರ್ಥಿಸಿಕೊಂಡರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಲಬುರ್ಗಿಯಲ್ಲಿ ಹತ್ಯೆ ಪ್ರಯತ್ನ ನಡೆದಿದೆ. ಶಿಷ್ಟಾಚಾರದ ಉಲ್ಲಂಘನೆಯಾಗಿದೆ. ಕಾಂಗ್ರೆಸ್‌ ಬೆಂಬಲಿಗರು ಬಂದು ಮುತ್ತಿಗೆ ಹಾಕಿದರೂ ಅವರನ್ನು ಚದುರಿಸುವ ಕೆಲಸವಾಗಿಲ್ಲ. ಕರ್ತವ್ಯ ಲೋಪ ಎಸಗಿದ ಕಲಬುರ್ಗಿ ಜಿಲ್ಲಾಧಿಕಾರಿ ಹಾಗೂ ಎಸ್‌.ಪಿ ವಿರುದ್ಧ  ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ರವಿಕುಮಾರ್‌ ವಿರುದ್ಧ ಪಕ್ಷ ಕ್ರಮ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಮೊದಲು ಸರ್ಕಾರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.