ಬೆಂಗಳೂರು: ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ–ಬೆಳಗಾವಿ–ವಿಜಯಪುರ ಮತ್ತು ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ–ಕೋಲಾರ–ಚಿಕ್ಕಬಳ್ಳಾಪುರಕ್ಕೆ ರಕ್ಷಣಾ ಕಾರಿಡಾರ್ ಮಂಜೂರು ಮಾಡುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರವೇ ಭೇಟಿ ಮಾಡುತ್ತೇವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯಕ್ಕೆ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮುನ್ನ, ಕೇಂದ್ರ ಸಚಿವ ಸಂಪುಟದ ಎದುರು ಪ್ರಸ್ತಾವವನ್ನು ಇಡಬೇಕಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುತ್ತದೆ’ ಎಂದರು.
‘ಇಸ್ರೇಲ್ಇ–ರಾನ್, ರಷ್ಯಾ–ಉಕ್ರೇನ್ ಸಂಘರ್ಷ ಮತ್ತು ಜಾಗತಿಕ ರಾಜಕೀಯ ಅಸ್ಥಿರತೆಯಿಂದ ಮುಂದಿನ 20 ವರ್ಷಗಳ ಕಾಲ ರಕ್ಷಣಾ ಉದ್ಯಮ, ವೈಮಾಂತರಿಕ್ಷ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆಯಂತಹ ಡೀಪ್– ಟೆಕ್ ಆಧಾರಿತ ಉದ್ಯಮಗಳಿಗೆ ಬೇಡಿಕೆ ಇರಲಿದೆ. ಇದನ್ನು ನಾವು ಸದಾವಕಾಶವಾಗಿ ಬಳಸಿಕೊಳ್ಳಲು ಕರ್ನಾಟಕವನ್ನು ಸಜ್ಜುಗೊಳಿಸಬೇಕಾದ ಜರೂರತ್ತು ಇದೆ’ ಎಂದರು.
‘ಬೆಂಗಳೂರಿನಲ್ಲಿ ಎರಡನೆಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಮುಂದಿನ ವಾರ ಭೇಟಿಯಾಗಿ, ಮಾತುಕತೆ ನಡೆಸಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘15ರ ಸಭೆಯಲ್ಲಿ ತೀರ್ಮಾನ’ ‘ದೇವನಹಳ್ಳಿ ಸಮೀಪ ಅತ್ಯಾಧುನಿಕ ರಕ್ಷಣಾ ಮತ್ತು ವೈಮಾನಿಕ ಪಾರ್ಕ್ ಸ್ಥಾಪನೆಗೆ ಭೂಮಿ ಬೇಕಾಗಿದೆ. ಆದರೆ ಭೂಮಿ ನೀಡಲು ರೈತರು ವಿರೋಧಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 15ರಂದು ನಡೆಯಲಿರುವ ಸಭೆಯಲ್ಲಿ ಈ ವಿಚಾರ ತೀರ್ಮಾನವಾಗಲಿದೆ ಎಂದು ನಿರೀಕ್ಷಿಸಲಾಗಿದೆ’ ಎಂದು ಎಂ.ಬಿ.ಪಾಟೀಲ ಹೇಳಿದರು. ‘ಭೂಸ್ವಾಧೀನ ಮುಂದುವರೆಸಲು ಸರ್ಕಾರ ತೀರ್ಮಾನ ತೆಗೆದುಕೊಂಡರೆ ರೈತರಿಗೆ ಸರಿಯಾದ ಪರಿಹಾರ ದೊರಕುವಂತೆ ಮಾಡುತ್ತೇವೆ. ರೈತರೂ ನಮ್ಮವರೇ ಆಗಿದ್ದು ಅವರ ಹಿತಾಸಕ್ತಿ ಕಾಪಾಡಬೇಕಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.