ADVERTISEMENT

ಪದವಿ ಪರೀಕ್ಷೆ ಗೊಂದಲಕ್ಕೆ ಶೀಘ್ರ ತೆರೆ: ಡಿಸಿಎಂ ಅಶ್ವತ್ಥ ನಾರಾಯಣ

ಹೊಸ ಶಿಕ್ಷಣ ನೀತಿಯಂತೆ ಪಠ್ಯ ರೂಪಿಸಲು ತಜ್ಞರ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 1:40 IST
Last Updated 17 ಏಪ್ರಿಲ್ 2020, 1:40 IST
ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ   

ಬೆಂಗಳೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಈಗ ನಡೆಸುತ್ತಿರುವ ಆನ್‌ಲೈನ್‌ ತರಗತಿಗಳಷ್ಟೇ ಸಾಕೇ, ಸಾಂಪ್ರದಾಯಿಕ ತರಗತಿಯನ್ನೂ ನಡೆಸಬೇಕೇ? ಪ್ರಾಯೋಗಿಕ ಪರೀಕ್ಷೆಯ ಗತಿ ಏನು? ಮೊದಲಾದ ವಿಚಾರಗಳಲ್ಲಿ ವಿಶ್ವವಿದ್ಯಾಲಯಗಳು ಶುಕ್ರವಾರ ಅಭಿಪ್ರಾಯ ತಿಳಿಸಲಿದ್ದು, ಇದನ್ನು ಆಧರಿಸಿ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರಕ್ಕೆ ಬರಲಿದೆ.

‘ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳೊಂದಿಗೆ ಗುರುವಾರ ನಾನು ವಿಡಿಯೊ ಸಂವಾದ ನಡೆಸಿದ್ದೇನೆ. ಪ್ರಾಯೋಗಿಕ ಪರೀಕ್ಷೆ ನಡೆಸುವ ವಿಚಾರದಲ್ಲಿ ಒಂದಿಷ್ಟು ಗೊಂದಲ ಇದೆ. ಆಂತರಿಕ ಪರೀಕ್ಷಾ ಮೌಲ್ಯಮಾಪನದ ಆಧಾರದಲ್ಲಿ ಅಂಕ ನೀಡುವುದಕ್ಕೆ ಸಮ್ಮತಿ ಸೂಚಿಸಿದರೆ ಜೂನ್ ಮೊದಲ ಅಥವಾ ಎರಡನೇ ವಾರದಲ್ಲೇ ಪರೀಕ್ಷೆ ನಡೆಸುವುದು ಸಾಧ್ಯವಾಗಬಹುದು. ಎಲ್ಲರ ಅಭಿಪ್ರಾಯ ಪಡೆದು ಪರೀಕ್ಷಾ ದಿನಾಂಕ ಪ್ರಕಟಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸುದ್ದಿಗಾರರಿಗೆ ತಿಳಿಸಿದರು.‌

‘ಕೊರೊನಾ ಭೀತಿಗೆ ಮೊದಲೇ ಉನ್ನತ ಶಿಕ್ಷಣ ಇಲಾಖೆ ‘ವಿಜಯೀಭವ’, ‘ಜ್ಞಾನನಿಧಿ’ ಎಂಬ ಯೂಟ್ಯೂಬ್‌ ಚಾನೆಲ್‌ಗಳನ್ನುಒದಗಿಸಿತ್ತು. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಮಟ್ಟಿಗೆ ಪ್ರಯೋಜನಕ್ಕೆ ಬಂದಿದೆ. ಕೇಂದ್ರದ ‘ಸ್ವಯಂ’ ಕಲಿಕಾ ಆ್ಯಪ್ ಸಹ ಬಹಳ ಉಪಕಾರಿಯಾಗಿದೆ, ಕರ್ನಾಟಕ ಮುಕ್ತ ವಿವಿ ಸಹ ಹೊಸ ಕಲಿಕಾ ಆ್ಯಪ್‌ ಅಭಿವೃದ್ಧಿಪಡಿಸಿದೆ’ ಎಂದರು.

ADVERTISEMENT

‘ವಿಶ್ವವಿದ್ಯಾಲಯಗಳು ಬಾಕಿ ಉಳಿಸಿಕೊಂಡಿರುವ ಪರೀಕ್ಷಾ ಫಲಿತಾಂಶಗಳನ್ನು ಶೀಘ್ರ ಪ್ರಕಟಿಸುವಂತೆ ಸೂಚಿಸಲಾಗಿದೆ’ ಎಂದರು.

ಎನ್‌ಇಪಿ ಅಳವಡಿಕೆ

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಆಶಯದಂತೆ ಹೊಸ ಕಲಿಕಾ ವಿಧಾನವನ್ನು ಅಳವಡಿಸುವ ಚಿಂತನೆ ಇದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದಲ್ಲಿ ಯಾವ ರೀತಿಯಲ್ಲಿ ಅಧ್ಯಯನ ವಿಷಯಗಳನ್ನು ಅಳವಡಿಸಬಹುದು ಎಂಬುದರ ಬಗ್ಗೆ ಐವರು ತಜ್ಞರ ಸಮಿತಿ ರಚಿಸಲಾಗಿದೆ. ಎರಡರಿಂದ ಮೂರು ತಿಂಗಳೊಳಗೆ ಈ ಸಮಿತಿಗಳು ತಮ್ಮ ವರದಿ ಸಿದ್ಧಪಡಿಸಲಿವೆ. ಸಾಧ್ಯವಾದರೆ ಈ ವರ್ಷ, ಇಲ್ಲವೇ ಮುಂದಿನ ವರ್ಷದಿಂದ ಇದನ್ನು ಜಾರಿಗೆ ತರಲಾಗುತ್ತದೆ’ ಎಂದರು.

ಕಲಾ ವಿಭಾಗದ ತಜ್ಞರ ಸಮಿತಿಗೆ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ‍್ರೊ.ಸಿದ್ಧೇಗೌಡ, ವಿಜ್ಞಾನ ವಿಭಾಗಕ್ಕೆ ಮೈಸೂರು ವಿ.ವಿ ಕುಲಪತಿ ಪ್ರೊ.ಹೇಮಂತ ಕುಮಾರ್, ವಾಣಿಜ್ಯ ವಿಭಾಗಕ್ಕೆ ರಾಣಿ ಚೆನ್ನಮ್ಮ ವಿ.ವಿ ಕುಲಪತಿ ಪ್ರೊ.ರಾಮಚಂದ್ರ, ತಾಂತ್ರಿಕ ಶಿಕ್ಷಣ ವಿಭಾಗಕ್ಕೆ ವಿಟಿಯು ಕುಲಪತಿ ಪ್ರೊ.ಕರಿಸಿದ್ಧಪ್ಪ ಹಾಗೂ ದೂರ ಶಿಕ್ಷಣ ವಿಭಾಗಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿ.ವಿ ಕುಲಪತಿ ಪ್ರೊ.ವಿಜಯಶಂಕರ್‌ ಅವರನ್ನು ನೇಮಿಸಲಾಗಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಲಾಕ್‌ಡೌನ್ ಅವಧಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.

‘ಇ– ಸಿಂಧುತ್ವ’ ಪ್ರಮಾಣಪತ್ರ ಕಡ್ಡಾಯ

ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರದ ಸಿಂಧುತ್ವ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸುವ ಉದ್ದೇಶದಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವಾ ಸಿಂಧು ಯೋಜನೆಯಡಿ ತಂತ್ರಾಂಶ ಆಧಾರಿತ ‘ಇ– ಸಿಂಧುತ್ವ’ ಪ್ರಮಾಣ ಪತ್ರ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸದ್ಯ ಹಸ್ತ ಚಾಲಿತ ವ್ಯವಸ್ಥೆಯಲ್ಲಿ ಸಿಂಧುತ್ವ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇನ್ನು ಮುಂದೆ ಇದನ್ನು ಕೈಬಿಟ್ಟು, ಹೊಸದಾಗಿ ಅಭಿವೃದ್ಧಿಪಡಿಸಿದ ಇ– ಸಿಂಧುತ್ವ ತಾಂತ್ರಿಕ ವ್ಯವಸ್ಥೆಯನ್ನು ಎಲ್ಲ ಜಿಲ್ಲಾಧಿಕಾರಿಗಳು ಜಾರಿಗೆ ತರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ಎಲ್ಲ ಇಲಾಖೆಗಳ ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಸಿಬ್ಬಂದಿಗೆ ಇ–ಆಡಳಿತ ಇಲಾಖೆ ತರಬೇತಿ ನೀಡಲಿದೆ. ಇನ್ನು ಮುಂದೆ ಹಸ್ತ ಚಾಲಿತ ಸಿಂಧುತ್ವ ಪ್ರಮಾಣ ಪತ್ರವನ್ನು ಅಸಿಂಧು ಎಂದು ಪರಿಗಣಿಸಲಾಗುವುದು. ನೇಮಕಾತಿ ಪ್ರಾಧಿಕಾರಗಳು ಇ– ಸಿಂಧುತ್ವ ಪ್ರಮಾಣ ಪತ್ರವನ್ನು ಮಾತ್ರ ಅಂಗೀಕರಿಸಬೇಕು ಎಂದೂ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.