ADVERTISEMENT

ಪದವಿ: ಬೋಧಕರ ವರ್ಗಾವಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 20:16 IST
Last Updated 5 ಏಪ್ರಿಲ್ 2022, 20:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಪ್ರಾಧ್ಯಾಪಕರು, ಸಹ ಮತ್ತು ಸಹಾಯಕ ಪ್ರಾಧ್ಯಾಪಕರು, ಗ್ರಂಥಪಾಲಕರು, ಕ್ರೀಡಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರ ಪೈಕಿ, ಶೇ 15ರಷ್ಟು ಮಂದಿಯ ವರ್ಗಾವಣೆಗೆ ಅವಕಾಶ ಕಲ್ಪಿಸಿ ಕಾಲೇಜು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ವರ್ಗಾವಣೆ ನಿಯಮಗಳ ಪ್ರಕಾರಮಂಜೂರಾದ ಒಟ್ಟು ಬೋಧಕ ಹುದ್ದೆಗಳಲ್ಲಿ ಶೇ 9ರಷ್ಟು ಕಡ್ಡಾಯ ವರ್ಗಾವಣೆ, ವಿಶೇಷ ಪ್ರಕರಣಗಳಲ್ಲಿ ಕೋರಿಕೆ ಯಡಿ ಶೇ 6ರಷ್ಟು (ಪತಿ- ಪತ್ನಿ ಪ್ರಕರಣಗಳಲ್ಲಿ ಶೇ 3 ಹಾಗೂ ವಿಧವೆ, ಸಿಂಗಲ್ ಪೇರೆಂಟ್, ಮಹಿಳಾ ವಿಚ್ಛೇದಿತರ
ಪ್ರಕರಣ, ಅಂಗವಿಕಲರ ಪ್ರಕರಣ ಮತ್ತು ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವ ಸಿಬ್ಬಂದಿ ಪ್ರಕರಣಗಳಲ್ಲಿ ತಲಾ ಶೇ 1) ಸೇರಿ ಒಟ್ಟು ಶೇ 15ರಷ್ಟು ಮಂದಿಯ ವರ್ಗಾವಣೆಗೆ ಅವಕಾಶ ಲಭ್ಯವಾಗಲಿದೆ. ಇದರಿಂದಾಗಿ ಸುಮಾರು 900 ಮಂದಿಗೆ ವರ್ಗಾವಣೆ ಅವಕಾಶ ಸಿಗಲಿದೆ.

‘ವಿಶೇಷ ಪ್ರಕರಣಗಳಲ್ಲಿ ಕೋರಿಕೆ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಏಪ್ರಿಲ್‌ 8 ಕೊನೆಯ ದಿನ. ಕಡ್ಡಾಯ ಮತ್ತು ವಿಶೇಷ ಪ್ರಕರಣಗಳಲ್ಲಿ ಸಿಬ್ಬಂದಿಯ ತಾತ್ಕಾಲಿಕ ವರ್ಗಾವಣೆ ಪಟ್ಟಿಯನ್ನು 13ರಂದು ಪ್ರಕಟಿಸಲಾಗುವುದು. ಈ ಪಟ್ಟಿಗೆ ಆಕ್ಷೇಪಣೆ ಗಳಿದ್ದರೆ 18ರ ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು. ವರ್ಗಾವಣೆ ಆದ್ಯತಾ ಪಟ್ಟಿ ಮತ್ತು ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲಾಗುವ ಖಾಲಿ ಹುದ್ದೆಗಳ ವಿವರಗಳನ್ನು 21ರಂದು ಪ್ರಕಟಿಸಲಾಗುವುದು. ವಿಶೇಷ ಪ್ರಕರಣಗಳಡಿ ಅರ್ಜಿ ಸಲ್ಲಿಸಿದವರ ವರ್ಗಾವಣೆಗೆ ಮೊದಲ ಸುತ್ತಿನ ಕೌನ್ಸೆಲಿಂಗ್‌ 23ರಂದು, ಎರಡನೇ ಸುತ್ತಿನ ಕೌನ್ಸೆಲಿಂಗ್‌ 26ರಂದು ನಡೆಯಲಿದೆ. ಕಡ್ಡಾಯ ವರ್ಗಾವಣೆಗೆ 27ರಂದು ಕೌನ್ಸೆಲಿಂಗ್ ನಡೆಯಲಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.