ADVERTISEMENT

ವಿಳಂಬದಿಂದ ಕೆಕೆಆರ್‌ಡಿಬಿಗೆ ₹ 387 ಕೋಟಿ ನಷ್ಟ: ಸಿಎಜಿ ವರದಿ

ಅನುದಾನ ಹಂಚಿಕೆಯ ಮಾನದಂಡದ ಕುರಿತು ಸಿಎಜಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 16:40 IST
Last Updated 23 ಫೆಬ್ರುವರಿ 2023, 16:40 IST
   

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) 2016–17ರಿಂದ 2020–21ರ ಅವಧಿಯಲ್ಲಿ ಅನುದಾನ ಬಳಕೆಯಲ್ಲಿ ವಿಳಂಬ ಮಾಡಿರುವುದರಿಂದ ₹ 387.52 ಕೋಟಿ ನಷ್ಟ ಅನುಭವಿಸಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ತಿಳಿಸಿದೆ.

2016–17ರಿಂದ 2020–21ರ ಅವಧಿಯಲ್ಲಿ ಕೆಕೆಆರ್‌ಡಿಬಿ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಿಎಜಿ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಂಡಿಸಲಾಯಿತು. ಮಂಡಳಿಯಲ್ಲಿ ಬಜೆಟ್‌ ರೂಪಿಸದೇ ಇರುವುದು, ಅನುದಾನ ಹಂಚಿಕೆ ಮತ್ತು ಬಳಕೆಯಲ್ಲಿ ಲೋಪ, ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವ ವ್ಯವಸ್ಥೆಯ ಅನುಪಸ್ಥಿತಿ ಇತ್ತು ಎಂಬುದನ್ನು ವರದಿ ಬಹಿರಂಗಪಡಿಸಿದೆ.

ಈ ಅವಧಿಯಲ್ಲಿ ಮಂಡಳಿಗೆ ₹ 5,631.86 ಕೋಟಿ ಅನುದಾನ ನಿಗದಿಯಾಗಿತ್ತು. ₹ 5,244.34 ಕೋಟಿ ಮಾತ್ರ ಬಿಡುಗಡೆಯಾಗಿತ್ತು. ಲಭ್ಯವಿರುವ ಹಣದ ಶೇಕಡ 75ರಷ್ಟನ್ನು ಬಳಕೆ ಮಾಡಿದ ಮೇಲೆ ಮುಂದಿನ ಕಂತನ್ನು ಬಿಡುಗಡೆ ಮಾಡುವ ಷರತ್ತು ಇತ್ತು. ಅದನ್ನು ಪಾಲಿಸದೇ ಇರುವುದರಿಂದ ಮಂಡಳಿಗೆ ನಷ್ಟವಾಯಿತು ಎಂಬ ಉಲ್ಲೇಖ ವರದಿಯಲ್ಲಿದೆ.

ADVERTISEMENT

ಬಿಡುಗಡೆಯಾದ ಮೊತ್ತದಲ್ಲಿ ಶೇ 20ಕ್ಕಿಂತ ಹೆಚ್ಚು ಮೊತ್ತವನ್ನು ಉಳಿಸಿಕೊಳ್ಳುವಂತಿಲ್ಲ ಎಂಬ ಷರತ್ತು ಇದೆ. ಆದರೆ, 2016–17ನೇ ಹಣಕಾಸು ವರ್ಷ ಹೊರತುಪಡಿಸಿ ಉಳಿದ ಎಲ್ಲ ಅವಧಿಯಲ್ಲೂ ಮಂಡಳಿಯ ಖಾತೆಯಲ್ಲಿ ಉಳಿಸಿಕೊಂಡಿದ್ದ ಮೊತ್ತ ಶೇ 20ರ ಮಿತಿಗಿಂತ ಜಾಸ್ತಿ ಇತ್ತು ಎಂದು ಸಿಎಜಿ ಹೇಳಿದೆ.

2013–14ರಿಂದ 2021–22ರ ಅವಧಿಯಲ್ಲಿ ಮಂಡಳಿಯು ಒಟ್ಟು 28,038 ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಅವುಗಳಲ್ಲಿ 3,731 ಕಾಮಗಾರಿಗಳನ್ನು ಕಾರ್ಯಯೋಜನೆಯ ಅನುಮೋದನೆ ಬಳಿಕ ರದ್ದುಗೊಳಿಸಲಾಗಿತ್ತು. 19,520 ಕಾಮಗಾರಿಗಳು ಪೂರ್ಣಗೊಂಡಿವೆ. 2,435 ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, 2,352 ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ ಎಂಬುದು ಪತ್ತೆಯಾಗಿದೆ.

2002ರ ಸಂಚಿತ ಅಭಾವ ಸೂಚ್ಯಂಕದ (ಸಿಡಿಐ) ಆಧಾರದಲ್ಲಿ ಅನುದಾನ ಹಂಚಿಕ ಮಾಡಲಾಗಿದೆ. ಹೊಸದಾಗಿ ರಚನೆಯಾದ ತಾಲ್ಲೂಕುಗಳಿಗೆ ಪ್ರತ್ಯೇಕವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಮಂಡಳಿಯು ದೀರ್ಘಾವಧಿಯ ಯೋಜನೆ ರೂಪಿಸಿಲ್ಲ ಎಂದು ವರದಿ ತಿಳಿಸಿದೆ.

ಕೆಕೆಆರ್‌ಡಿಬಿ ಗಮನವು ರಸ್ತೆ ಸಂಪರ್ಕ ಒದಗಿಸುವುದಕ್ಕೆ ಕೇಂದ್ರೀಕೃತವಾಗಿತ್ತು. ಶಿಕ್ಷಣ, ಆರೋಗ್ಯ, ಕೌಶಲ ಅಭಿವೃದ್ಧಿ ಮುಂತಾದ ಕ್ಷೇತ್ರಗಳಿಗೆ ಆದ್ಯತೆ ನೀಡಿಲ್ಲ. ಮಂಡಳಿಯು ನಿರ್ಮಿಸಿದ ಆಸ್ತಿಗಳ ಬಳಕೆಯ ಮೇಲ್ವಿಚಾರಣೆಗೆ ಯಾವುದೇ ವ್ಯವಸ್ಥೆ ರೂಪಿಸಿಲ್ಲ. ಹಲವು ಆಸ್ತಿಗಳು ಬಳಕೆಯಾಗದೇ ಇರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ ಎಂದು ಸಿಎಜಿ ಹೇಳಿದೆ.

ಅಕ್ರಮವಾಗಿ ₹ 6.07 ಕೋಟಿ ‍ಪಾವತಿ: ಮಂಡಳಿಯು 2020ರಲ್ಲಿ ₹ 9.97 ಕೋಟಿ ದರದಲ್ಲಿ ಗುತ್ತಿಗೆ ಆಧಾರದಲ್ಲಿ ಯೋಜನಾ ಬೆಂಬಲ ಕಚೇರಿ (ಪಿಎಸ್‌ಒ) ಸ್ಥಾಪಿಸಿತು. ಒಪ್ಪಂದದಂತೆ ಯಾವುದೇ ಸೇವೆ ಒದಗಿಸಿದಿದ್ದರೂ ಪಿಎಸ್‌ಒಗೆ 2021ರ ಡಿಸೆಂಬರ್‌ನಿಂದ 2022ರ ಮಾರ್ಚ್‌ ಅವಧಿಯಲ್ಲಿ ₹ 6.07 ಕೋಟಿಯನ್ನು ಅಕ್ರಮವಾಗಿ ಪಾವತಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ವಿವೇಚನಾ ನಿಧಿ ಹಂಚಿಕೆಯಲ್ಲಿ ಅಸಮತೋಲನ

ಕೆಕೆಆರ್‌ಡಿಬಿ ಅಧ್ಯಕ್ಷರ ವಿವೇಚನಾ ನಿಧಿ ಹಂಚಿಕೆಯಲ್ಲಿ ಭಾರಿ ಅಸಮತೋಲನ ಇರುವುದನ್ನು ಸಿಎಜಿ ಗುರುತಿಸಿದೆ. ಕಲಬುರಗಿ ಜಿಲ್ಲೆಗೆ ಸಿಂಹಪಾಲು ನೀಡಿರುವ ಅಂಶ ವರದಿಯಲ್ಲಿದೆ.

ವಿವೇಚನಾ ನಿಧಿಯಲ್ಲಿ ಕಲಬುರಗಿ ಜಿಲ್ಲೆಗೆ ₹ 86.27 ಕೋಟಿ (ಶೇ 73.97), ಬೀದರ್‌ ಜಿಲ್ಲೆಗೆ ₹ 19.31 ಕೋಟಿ (ಶೇ 16.56), ಕೊಪ್ಪಳ ಜಿಲ್ಲೆಗೆ ₹ 7.20 ಕೋಟಿ (ಶೇ 6.17), ರಾಯಚೂರು ಜಿಲ್ಲೆಗೆ ₹ 1.45 ಕೋಟಿ (ಶೇ 1.25), ಯಾದಗಿರಿ ಜಿಲ್ಲೆಗೆ ₹ 1.42 ಕೋಟಿ (ಶೇ 1.21) ಮತ್ತು ಬಳ್ಳಾರಿ ಜಿಲ್ಲೆಗೆ ₹ 98 ಲಕ್ಷ (ಶೇ 0.84) ಅನುದಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.