ADVERTISEMENT

ದೆಹಲಿ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಂತಿಮಯಾತ್ರೆ: ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2025, 12:56 IST
Last Updated 10 ಜನವರಿ 2025, 12:56 IST
ಕಾಂಗ್ರೆಸ್‌–ಬಿಜೆಪಿ
ಕಾಂಗ್ರೆಸ್‌–ಬಿಜೆಪಿ    

ಬೆಂಗಳೂರು: ‘ಇಂಡಿಯಾ’ ಎಂಬ ಹೆಸರಿನಲ್ಲಿ ಕಾಂಗ್ರೆಸ್‌ ರಚಿಸಿದ್ದ ಮೈತ್ರಿಕೂಟದಿಂದ ಇದೀಗ ಕಾಂಗ್ರೆಸ್‌ ಪಕ್ಷವನ್ನೇ ಹೊರಹಾಕಲಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ಅಧಿಕಾರದ ಆಸೆಗಾಗಿ ಕಾಂಗ್ರೆಸ್ ಕಟ್ಟಿದ ಗೂಡಿನಿಂದ ಪಕ್ಷವೇ ಹೊರಬಿದ್ದಿದೆ. ದೆಹಲಿ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ ಪಾಲಿಗೆ ಅಕ್ಷರಶಃ ಅಂತಿಮಯಾತ್ರೆ ಎಂಬಂತಾಗಿದೆ’ ಎಂದು ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ಸಹವರ್ತಿ ಪಕ್ಷಗಳು ಸೇರಿಕೊಂಡು ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಮುಹೂರ್ತ ಫಿಕ್ಸ್‌ ಮಾಡಿದ್ದಾರೆ. ‘ಇಂಡಿಯಾ’ ಮೈತ್ರಿಕೂಟದೊಳಗಿನ ಕಲಹವನ್ನು ಉಲ್ಲೇಖಿಸಿ ಒಕ್ಕೂಟದ ಪ್ರಮುಖ ನಾಯಕ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ‘ಇಂಡಿ’ ಒಕ್ಕೂಟವನ್ನೇ ಬರ್ಖಾಸ್ತು ಮಾಡಲು ಸಲಹೆ ನೀಡಿದ್ದಾರೆ ಎಂದು ಬಿಜೆಪಿ ಹೇಳಿದೆ.

ADVERTISEMENT

ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್ಸಿನ ನಾಯಕತ್ವವನ್ನೇ ‘ಇಂಡಿಯಾ’ ಒಕ್ಕೂಟದ ಮಿತ್ರ ಪಕ್ಷಗಳು ಟೀಕಿಸುತ್ತಿವೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಏಕಾಂಗಿಯಾಗಿರುವುದು ಕಾಂಗ್ರೆಸ್ ವಿರುದ್ಧ ದೇಶದಾದ್ಯಂತ ಎದ್ದಿರುವ ಆಕ್ರೋಶದ ಅಲೆಗಳಿಗೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ ಚಿಂತನೆಗಳು ಈ ದೇಶಕ್ಕೆ ಮಾರಕ ಎಂಬುದನ್ನು ಕಾಂಗ್ರೆಸ್‌ ಸಹವರ್ತಿಗಳೇ ಅರಿತುಕೊಂಡಿದ್ದಾರೆ ಎಂದು ತಿಳಿಸಿದೆ.

‘ಇಂಡಿಯಾ’ ಮೈತ್ರಿಕೂಟವನ್ನು ಕೇವಲ ಲೋಕಸಭೆ ಚುನಾವಣೆ ಸಲುವಾಗಿ ಮಾತ್ರ ರಚನೆ ಮಾಡಲಾಗಿದೆ. ಸದ್ಯ ನಾಯಕತ್ವ ಮತ್ತು ರಾಜಕೀಯ ಕಾರ್ಯಸೂಚಿ ಬಗ್ಗೆ ಸ್ಪಷ್ಟತೆಯ ಕೊರತೆ ಇರುವುದರಿಂದ ಮೈತ್ರಿಕೂಟವನ್ನು ವಿಸರ್ಜಿಸುವುದು ಉತ್ತಮ ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.