ADVERTISEMENT

‘ಅಲಹಾಬಾದ ಸಫೇದ್‌’ ಸೀಬೆಗೆ ಹೆಚ್ಚಿದ ಬೇಡಿಕೆ

ಚಿಂಚೋಳಿ ಪಟ್ಟಣದ ವಿವಿಧೆಡೆ ಹಣ್ಣುಗಳ ಖರೀದಿ ಭರಾಟೆ

ಜಗನ್ನಾಥ ಡಿ.ಶೇರಿಕಾರ
Published 8 ಜನವರಿ 2021, 6:50 IST
Last Updated 8 ಜನವರಿ 2021, 6:50 IST
ಚಿಂಚೋಳಿಯಲ್ಲಿ ಅಲಹಾಬಾದ ಸಫೇದ್ ಸೀಬೆ ಹಣ್ಣುಗಳ ಸುಗ್ಗಿ ಆರಂಭವಾಗಿದ್ದು, ಗ್ರಾಹಕರು ಹಣ್ಣುಗಳ ಖರೀದಿಯಲ್ಲಿ ತೊಡಗಿರುವುದು
ಚಿಂಚೋಳಿಯಲ್ಲಿ ಅಲಹಾಬಾದ ಸಫೇದ್ ಸೀಬೆ ಹಣ್ಣುಗಳ ಸುಗ್ಗಿ ಆರಂಭವಾಗಿದ್ದು, ಗ್ರಾಹಕರು ಹಣ್ಣುಗಳ ಖರೀದಿಯಲ್ಲಿ ತೊಡಗಿರುವುದು   

ಚಿಂಚೋಳಿ: ಚಂದ್ರಂಪಳ್ಳಿ ಸೀಬೆ (ಪೇರಲ) ಹಣ್ಣುಗಳೆಂದೇ ಖ್ಯಾತಿ ಪಡೆದ ಅಲಹಾಬಾದ ಸಫೇದ್ ಸೀಬೆಯ ಸುಗ್ಗಿ ಆರಂಭವಾಗಿದ್ದು, ಜನರು ಖರೀದಿಗೆ ಮುಗಿಬೀಳುತ್ತಿದ್ದಾರೆ.

ಪ್ರಸಕ್ತ ವರ್ಷ ಅತಿವೃಷ್ಟಿಯಿಂದ ಹೂವುಗಳು ಉದುರಿದ್ದರಿಂದ ಹಣ್ಣಿನ ಮರಗಳಲ್ಲಿ ಫಸಲಿನ (ಇಳುವರಿ) ಪ್ರಮಾಣದಲ್ಲಿ ಕುಸಿತ ಕಾಣಿಸಿದೆ. ಆದರೆ ಗ್ರಾಹಕರಿಂದ ಬೇಡಿಕೆ ಹೆಚ್ಚಾಗಿದ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಹಮದ್ ಮನ್ನಾನ್.

ಚಿಂಚೋಳಿ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಪೇರಲ ಹಣ್ಣುಗಳ ಭರಾಟೆ ಜೋರಾಗಿದೆ. ತರಹೇವಾರಿ ತಳಿಗಳ ಹಣ್ಣುಗಳು ತನ್ನದೇ ಆದ ಹಿತ(ಸಿಹಿ) ಹೊಂದಿದ್ದರಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಾಗುತ್ತಿದೆ.

ADVERTISEMENT

ಪಟ್ಟಣದಲ್ಲಿ ಹಾಗೂ ವಿವಿಧ ರಸ್ತೆಗಳ ಬದಿಯಲ್ಲಿ ಅಲಹಾಬಾದ ಸಫೇದ್ ಮತ್ತು ಲಕ್ನೊ-49 ಹಣ್ಣುಗಳು ಲಭ್ಯವಿವೆ. ಆದರೆ ಅಲಹಾಬಾದ ಸಫೇದ್‌ ಮಾರಾಟ ನಿರ್ದಿಷ್ಟ ಸ್ಥಳದಲ್ಲಿ ಮಾತ್ರ ನಡೆದರೆ ಲಕ್ನೋ -49 ಹಣ್ಣುಗಳ ಮಾರಾಟ ಎಲ್ಲೆಡೆ ಜಾಸ್ತಿಯಿದೆ.

ಪಟ್ಟಣದ ಪ್ರಗತಿಪರ ರೈತ ಗಜೇಂದ್ರ ಪಾಟೀಲರ ಹೊಲದಲ್ಲಿನ ಹಣ್ಣುಗಳು ಚಂದ್ರಂಪಳ್ಳಿ ಸೀಬೆ ಎಂದು ಖ್ಯಾತಿ ಪಡೆದ ಅಲಹಾಬಾದ ಸಫೇದ್ ಹಣ್ಣುಗಳಾಗಿವೆ. ಇವುಗಳನ್ನು ಕೆಜಿಗೆ ₹60ರ ದರದಲ್ಲಿ ಪದ್ಮಾ ಕಾಲೇಜು ಎದುರಿಗೆ ಮಾರಾಟ ಮಾಡಲಾಗುತ್ತಿದೆ.

ಬೇರೆ ಕಡೆಗಳಲ್ಲಿ ದೊರೆಯುವ ಹಣ್ಣು ಲಕ್ನೊ- 49 ತಳಿಯ ಹಣ್ಣುಗಳಾಗಿದ್ದು, ಗಾತ್ರದಲ್ಲಿ ಅಲಹಾಬಾದ ಸೀಬೆಯ ಹಣ್ಣುಗಳಿಗಿಂತಲೂ ದೊಡ್ಡದಾಗಿವೆ. ಲಕ್ನೋ- 49 ತಳಿಯ ಹಣ್ಣುಗಳ ಬೀಜ ಅತ್ಯಂತ ಗಟ್ಟಿಯಾಗಿದ್ದಲ್ಲದೇ, ಹಣ್ಣಿನಲ್ಲಿ ಬೀಜ ಹೆಚ್ಚಾಗಿವೆ. ಅಲಹಾಬಾದ್ ಸಫೇದ್ ಹಣ್ಣುಗಳಲ್ಲಿ ಬೀಜ ಕಡಿಮೆ ಜತೆಗೆ ಮೃದುವಾಗಿವೆ.

ಅಲಹಾಬಾದ ಸಫೇದ್ ಹಣ್ಣುಗಳು ನೋಡುವುದಕ್ಕೂ ಆಕರ್ಷಕವಾಗಿವೆ. ಜತೆಗೆ ತಿನ್ನಲು ಅತ್ಯಂತ ಹಿತಕಾರಿಯಾಗಿವೆ. ಈ ಹಣ್ಣುಗಳು ತಿಳಿ ಹಸಿರು ಬಣ್ಣದಲ್ಲಿರುವಾಗ ತಿಂದರೆ ಅದರ ಮಜಾನೇ ಬೇರೆ ಎನ್ನುತ್ತಾರೆ ಉಪನ್ಯಾಸಕ ಶಾಂತವೀರ ಹೀರಾಪುರ.

‘ನನ್ನ ತೋಟದಲ್ಲಿ 2 ಎಕರೆ ಜಮೀನಿನಲ್ಲಿ 175 ಗಿಡಗಳಿವೆ. ನಾನು 23 ವರ್ಷಗಳಿಂದ ಈ ಹಣ್ಣುಗಳ ಬೇಸಾಯದಿಂದ ಆದಾಯ ಪಡೆಯುತ್ತಿದ್ದೇನೆ.ಪ್ರಸಕ್ತ ವರ್ಷ ಅಲಹಾಬಾದ ಸಫೇದ್ ಹಣ್ಣುಗಳು ವಾರ್ಷಿಕ ಗುತ್ತಿಗೆ ₹2.10 ಲಕ್ಷಕ್ಕೆ ನೀಡಿದ್ದೇನೆ’ ಎಂದು ಗಜೇಂದ್ರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣಿನ ವೈಶಿಷ್ಟ್ಯ:

ತಿರುಳು ಜಾಸ್ತಿ, ಬೀಜ ಕಡಿಮೆ. 2–3 ದಿನ ಸುರಕ್ಷಿತವಾಗಿಡಬಹುದಾಗಿದೆ.ಇಲ್ಲಿ 3– 4 ವರ್ಷಗಳ ಹಿಂದೆ ತೆಲಂಗಾಣದ ಕೋಹೀರ್‌ನಿಂದ ಸೀಬೆಹಣ್ಣುಗಳು ತಂದು ಮಾರಾಟ ಮಾಡುತ್ತಿದ್ದರು. ಇವುಗಳನ್ನು ಅಲಹಾಬಾದ ಸಫೇದ್ ಎಂದೇ ಬಿಂಬಿಸುತ್ತಿದ್ದರು. ಆದರೆ ವಾಸ್ತವವಾಗಿ ಅವರು ಅಲಹಾಬಾದ್ ಸಫೇದ್ ತಳಿಯ ಹಣ್ಣುಗಳಲ್ಲ ಎನ್ನುತ್ತಾರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕ ರಾಜಕುಮಾರ ಗೋವಿಂದ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.