ADVERTISEMENT

‘ವೀರಶೈವ–ಲಿಂಗಾಯತರು’ ಒಗ್ಗೂಡಲು ಕರೆ: ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2022, 19:45 IST
Last Updated 12 ನವೆಂಬರ್ 2022, 19:45 IST
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತರ ಮಹಾಸಭಾ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ಶನಿವಾರ ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ, ರಾಜ್ಯ ಘಟಕದ ಅಧ್ಯಕ್ಷ ನಟರಾಜ್ ಸಾಗರನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ, ಮುಖಂಡರಾದ ಟಿ.ಬಿ.ಶೇಖರ್, ರಾಜಶೇಖರ್, ಎಂ.ಎನ್.ಶಶಿಧರ್ ಇತರರು ಉಪಸ್ಥಿತರಿದ್ದರು
ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತರ ಮಹಾಸಭಾ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ಶನಿವಾರ ಶಾಸಕ ಈಶ್ವರ ಖಂಡ್ರೆ ಉದ್ಘಾಟಿಸಿದರು. ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾ ಹಿರಿಯ ಉಪಾಧ್ಯಕ್ಷ ಎನ್.ತಿಪ್ಪಣ್ಣ, ರಾಜ್ಯ ಘಟಕದ ಅಧ್ಯಕ್ಷ ನಟರಾಜ್ ಸಾಗರನಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ, ಮುಖಂಡರಾದ ಟಿ.ಬಿ.ಶೇಖರ್, ರಾಜಶೇಖರ್, ಎಂ.ಎನ್.ಶಶಿಧರ್ ಇತರರು ಉಪಸ್ಥಿತರಿದ್ದರು   

ತುಮಕೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿರುವ ಬೆಂಗಳೂರು ವಿಭಾಗ ಮಟ್ಟದ ಸಮಾವೇಶಕ್ಕೆ ನಗರದ ಸಿದ್ಧಗಂಗಾ ಮಠದ ಆವರಣದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿಗೆ ಬೇಡಿಕೆ ಸಲ್ಲಿಸುವ ಮತ್ತುಸಮುದಾಯ ಒಗ್ಗೂಡುವಿಕೆ ಬಗ್ಗೆ ಪ್ರಮುಖವಾಗಿ ಚರ್ಚಿಸಲಾಯಿತು. ಎರಡು ದಿನದ ಸಮಾವೇಶಕ್ಕೆ ಭಾನುವಾರ ತೆರೆ ಬೀಳಲಿದೆ.

ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಪ್ರಮುಖರು ಭಾಗವಹಿಸಿದ್ದ ಸಮಾವೇಶದಲ್ಲಿ ವೀರಶೈವ ಹಾಗೂ ಲಿಂಗಾಯತರು ಪ್ರತ್ಯೇಕವಲ್ಲ. ಪ್ರತ್ಯೇಕ ಹೆಸರಿನಿಂದ ಕರೆದರೂ ಇವೆರಡೂ ಒಂದೇ ಸಮುದಾಯ ಎಂದು ಪ್ರತಿಪಾದಿಸಲಾಯಿತು.

ADVERTISEMENT

ವೀರಶೈವ– ಲಿಂಗಾಯತರ ಇತರ ಉಪಪಂಗಡಗಳು ಭೇದ ಎಣಿಸದೆ ಮಹಾಸಭಾದ ಅಡಿಯಲ್ಲೇ ಒಗ್ಗೂಡಬೇಕು. ಒಳಪಂಗಡಗಳ ಹೆಸರಿನಲ್ಲಿ ಸಮುದಾಯದ ನಡುವೆ ತಾರತಮ್ಯ, ಭಿನ್ನಾಭಿಪ್ರಾಯ ತರಬಾರದು. ‘ನಾವೆಲ್ಲರೂ ಒಂದೇ’ ಎಂಬ ಭಾವನೆಯಿಂದ ಸಂಘಟಿತರಾಗುವಂತೆ ಕರೆ ನೀಡಲಾಯಿತು.

ಲಿಂಗಾಯತ ಹಾಗೂ ವೀರಶೈವರು ಬೇರೆ ಎಂದು ಕೆಲವರು ಪ್ರತ್ಯೇಕಿಸಲು ನೋಡುತ್ತಿದ್ದಾರೆ. ಕೆಲವರು ಲಿಂಗ ಪೂಜಿಸಿದರೆ, ಮತ್ತೆ ಕೆಲವರು ಶಿವನನ್ನು ಆರಾಧಿಸುತ್ತಾರೆ. ಪೂಜೆಯಲ್ಲಿ ವ್ಯತ್ಯಾಸ ಕಾಣಬಹುದೇ ಹೊರತು ಸಮುದಾಯದ ನಡುವೆ ಭಿನ್ನತೆ ಇಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಒಗ್ಗೂಡುವ ಅಗತ್ಯವಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ವೀರಶೈವ ಲಿಂಗಾಯತರ ಹಲವು ಉಪಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಿಲ್ಲ. ಇದರಿಂದಾಗಿ ಉದ್ಯೋಗ ಹಾಗೂ ಶಿಕ್ಷಣದಿಂದ ಸಮುದಾಯದ ಮಕ್ಕಳು ವಂಚಿತರಾಗುತ್ತಿದ್ದಾರೆ. ಕೇಂದ್ರ ಸರ್ಕಾರ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಲಾಯಿತು.

ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಮಹಾಸಭಾ ಮುಖಂಡರಾದ ಎನ್.ತಿಪ್ಪಣ್ಣ, ಈಶ್ವರ ಖಂಡ್ರೆ, ನಟರಾಜ್ ಸಾಗರನಹಳ್ಳಿ, ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಅರುಣಾದೇವಿ ಮೊದಲಾದವರು ಭಾಗವಹಿಸಿದ್ದರು.

ವಾಣಿಜ್ಯ– ಕೈಗಾರಿಕೆ, ಕೃಷಿ ಕ್ಷೇತ್ರದ ಸವಾಲುಗಳು– ಪರಿಹಾರೋಪಾಯಗಳು, ಶಿಕ್ಷಣ ಮತ್ತು ಉದ್ಯಮದಲ್ಲಿ ಯುವಕರ ಪಾತ್ರ, ವೀರಶೈವ– ಲಿಂಗಾಯತ ಧರ್ಮ ಮತ್ತು ತತ್ವಾಚರಣೆಗಳು ಕುರಿತು ಗೋಷ್ಠಿಗಳು ನಡೆದವು. ಎರಡು ದಿನ ಸಾಕಷ್ಟು ಚರ್ಚೆಗಳು
ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.