ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದತಿಗೆ ಒತ್ತಾಯ; ವಾಟಾಳ್‌ ವಶಕ್ಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 8:15 IST
Last Updated 19 ಜೂನ್ 2020, 8:15 IST
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಶುಕ್ರವಾರ ಹಿರೇಬಾಗೇವಾಡಿಯ ಟೋಲ್‌ ಗೇಟ್‌ ಬಳಿ ಪೊಲೀಸರು ವಶಕ್ಕೆ ಪಡೆದರು.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಶುಕ್ರವಾರ ಹಿರೇಬಾಗೇವಾಡಿಯ ಟೋಲ್‌ ಗೇಟ್‌ ಬಳಿ ಪೊಲೀಸರು ವಶಕ್ಕೆ ಪಡೆದರು.   

ಹಿರೇಬಾಗೇವಾಡಿ: ಎಸ್ಸೆಸ್ಸೆಲ್ಸಿ ಹಾಗೂ ಪದವಿ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ಶುಕ್ರವಾರ ಹಿರೇಬಾಗೇವಾಡಿಯ ಟೋಲ್‌ ಗೇಟ್‌ ಬಳಿ ಪೊಲೀಸರು ವಶಕ್ಕೆ ಪಡೆದರು.

ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ಬೆಳಗಾವಿಯತ್ತ ವಾಟಾಳ್‌ ಸಾಗುತ್ತಿದ್ದರು. ಅವರ ಬರುವಿಕೆಯನ್ನು ಕಾಯುತ್ತಿದ್ದ ಪೊಲೀಸರು, ಟೋಲ್‌‌ಗೇಟ್‌ ಬಳಿ ಅವರ ಕಾರನ್ನು ತಡೆದರು. ಮುಂದೆ ಸಾಗಲು ಅವಕಾಶ ನೀಡಲಿಲ್ಲ. ಠಾಣೆಗೆ ಕರೆದೊಯ್ದು, ಅರ್ಧ ತಾಸಿನ ನಂತರ ಬಿಟ್ಟುಕಳುಹಿಸಿದರು. ಅವರು ವಾಪಸ್‌ ಹುಬ್ಬಳ್ಳಿಯತ್ತ ಮರಳಿದರು.

ಪರೀಕ್ಷೆ ರದ್ದತಿಗೆ ಒತ್ತಾಯ: ಬಿಡುಗಡೆಗೂ ಮುಂಚೆ ಠಾಣೆಯ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ವಾಟಾಳ್‌, ‘ಮಾರಕ ರೋಗ ಕೋವಿಡ್‌–19 ತೀವ್ರವಾಗಿ ಹರಡುತ್ತಿದ್ದು, ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ. ದೇಶದ ಸುಮಾರು 12 ರಾಜ್ಯಗಳು ಪರೀಕ್ಷೆಗಳನ್ನು ರದ್ದುಪಡಿಸಿ, ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಹೋಗಲು ಅವಕಾಶ ಕೊಟ್ಟಿವೆ. ಇದೇ ರೀತಿ ನಮ್ಮ ರಾಜ್ಯದಲ್ಲೂ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘10ನೇ ತರಗತಿಯಲ್ಲಿರುವ ಸುಮಾರು 9 ಲಕ್ಷ ವಿದ್ಯಾರ್ಥಿಗಳ ಜೀವನದ ಜೊತೆ ಸರ್ಕಾರ ಚೆಲ್ಲಾಟವಾಡಬಾರದು. ಸರ್ಕಾರ ತಕ್ಷಣ ನಿರ್ಧಾರ ಕೈಗೊಳ್ಳಬೇಕು’ ಎಂದು ಹೇಳಿದರು.

‘ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡಲಿಲ್ಲ. ನಾಳೆ (ಶನಿವಾರ) ಬೆಂಗಳೂರಿನಲ್ಲಿರುವ ಪರೀಕ್ಷಾ ಮಂಡಳಿಯ ಎದುರು ಹಾಗೂ ಇದೇ ತಿಂಗಳು 23ರಂದು ಶಿಕ್ಷಣ ಸಚಿವ ಎಸ್‌. ಸುರೇಶಕುಮಾರ್‌ ಅವರ ಮನೆ ಮುಂದೆ ಧರಣಿ ಮಾಡುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.