ADVERTISEMENT

ಕೆಎಎಸ್ ಪರೀಕ್ಷೆ ಮುಂದೂಡಲು ಸಿದ್ದರಾಮಯ್ಯ, ದಿನೇಶ್‌, ಜಿ.ಸಿ. ಚಂದ್ರಶೇಖರ್ ಆಗ್ರಹ

ಕೆಪಿಎಸ್‌ಸಿಯ ತರಾತುರಿ ನಡೆಯಿಂದ ಅನುಮಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 3:23 IST
Last Updated 17 ಆಗಸ್ಟ್ 2020, 3:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಕೊರೊನಾ ಸೋಂಕಿನ ಕಾರಣ ಪ್ರಸಕ್ತ ವರ್ಷ ಎಲ್ಲ ನೇಮಕಾತಿಗಳನ್ನು ತಡೆಹಿಡಿಯಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 106 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಇದೇ 24ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಪರೀಕ್ಷೆಗೆ ನೋಂದಾಯಿಸಿದ ಅಭ್ಯರ್ಥಿಗಳ ಪೈಕಿ, ಶೇ 20ರಷ್ಟು ಸರ್ಕಾರಿ ನೌಕರರು. ಅವರು ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ಯಾರಿಗಾದರೂ ಸೋಂಕು ಇದ್ದರೆ ಉಳಿದವರಿಗೆ ಹರಡುವ ಸಾಧ್ಯತೆ ಇಲ್ಲವೇ. ಈ ಬಗ್ಗೆ ಮುಖ್ಯಮಂತ್ರಿ ತಕ್ಷಣ ಗಮನಹರಿಸಿ, ಪರೀಕ್ಷೆ ಮುಂದೂಡಬೇಕು’ ಎಂದೂ ಆಗ್ರಹಿಸಿದ್ದಾರೆ.

‘ರಾಜ್ಯದ ಆರು ಜಿಲ್ಲೆಗಳಲ್ಲಿ ಕೆಪಿಎಸ್‌ಸಿ ಪರೀಕ್ಷಾ ಕೇಂದ್ರಗಳಿವೆ. ಕೊರೊನಾ ಸೋಂಕಿನ ಈ ದಿನಗಳಲ್ಲಿ 30 ಜಿಲ್ಲೆಗಳ ಅಭ್ಯರ್ಥಿಗಳ ಪ್ರಯಾಣ ಮತ್ತು ವಾಸ್ತವ್ಯ ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಬೇಕು' ಎಂದು ಒತ್ತಾಯಿಸಿದ್ದಾರೆ.

ADVERTISEMENT

ಸಿದ್ಧರಾಮಯ್ಯ ಅವರ ಮಾತಿಗೆ ಧ್ವನಿಗೂಡಿಸಿರುವ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಮತ್ತು ರಾಜ್ಯ
ಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌, ‘ಸರ್ಕಾರದ ಸುತ್ತೋಲೆ ಧಿಕ್ಕರಿಸಿ ಪರೀಕ್ಷೆ ನಡೆಸಲು ಕೆಪಿಎಸ್‌ಸಿ ಮುಂದಾಗಿರುವುದು ಯಾಕೆ’ ಎಂದು ಪ್ರಶ್ನಿಸಿದ್ದಾರೆ.

’ಕೆಪಿಎಸ್‌ಸಿಯ ತರಾತುರಿ ಅನುಮಾನ ಹುಟ್ಟಿಸಿದೆ. ಕೊರೊನಾ ಭಯದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೇಗೆ ಸಾಧ್ಯ’ ಎಂದು ದಿನೇಶ್‌ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಚಂದ್ರಶೇಖರ್‌, ‘ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ 5 ಲಕ್ಷ ಅಭ್ಯರ್ಥಿಗಳಲ್ಲಿ ಹಲವು ಸರ್ಕಾರಿ ನೌಕರರಿದ್ದಾರೆ. ಅವರೆಲ್ಲ ಕೊರೊನಾ ಸೇನಾನಿಗಳಾಗಿ ಕೆಲಸ ಮಾಡುತ್ತಿರುವುದರಿಂದ ಪರೀಕ್ಷೆ ಬರೆಯುವುದರಿಂದ ವಂಚಿತರಾಗಲಿದ್ದಾರೆ. ಅಷ್ಟಕ್ಕೂ ಕೇವಲ 106 ಹುದ್ದೆಗಳಿಗೆ ಪರೀಕ್ಷೆ ನಡೆಸುವ ತುರ್ತು ಏನು?. ಎಲ್ಲರಿಗೂ ಅವಕಾಶ ಮಾಡಿಕೊಡಲು, ಪರೀಕ್ಷೆ ಮುಂದೂಡಲೇಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.