ADVERTISEMENT

ಅಕ್ರಮ ಡಿನೋಟಿಫೈ ಪ್ರಕರಣ: ಯಡಿಯೂರಪ್ಪ ಖುಲಾಸೆ

ನಾಗದೇವನಹಳ್ಳಿ: ಅಕ್ರಮ ಡಿನೋಟಿಫೈ ಆರೋಪ

ಬಿ.ಎಸ್.ಷಣ್ಮುಖಪ್ಪ
Published 28 ಆಗಸ್ಟ್ 2018, 19:38 IST
Last Updated 28 ಆಗಸ್ಟ್ 2018, 19:38 IST
ಬಿ.ಎಸ್‌.ಯಡಿಯೂರಪ್ಪ 
ಬಿ.ಎಸ್‌.ಯಡಿಯೂರಪ್ಪ    

ಬೆಂಗಳೂರು: ಅಕ್ರಮ ಡಿನೋಟಿಫೈ ಪ್ರಕರಣದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ ಖುಲಾಸೆಗೊಳಿಸಿದೆ.

‘ನಗರದ ನಾಗದೇವನಹಳ್ಳಿ ವ್ಯಾಪ್ತಿಯ ಸರ್ವೆ ನಂ.77 ಮತ್ತು 78ರಲ್ಲಿ 22 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ’ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಸಲ್ಲಿಸಿದ್ದ ದೂರನ್ನು ನ್ಯಾಯಾಧೀಶ ಬಿ.ವಿ.ಪಾಟೀಲ ವಜಾಗೊಳಿಸಿದ್ದಾರೆ.

‘ಯಡಿಯೂರಪ್ಪ ಸೇರಿದಂತೆ ಮಾಜಿ ಸಚಿವ ವಿ.ಸೋಮಣ್ಣ, ಅವರ ಪತ್ನಿ ಶೈಲಜಾ ಹಾಗೂ ಜಮೀನಿನ ಮಾಲೀಕ ಡಿ.ಲಿಂಗಯ್ಯ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್‌ ಪರಿಗಣನೆಗೆ ಅರ್ಹವಾಗಿದೆ‘ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಏನಿದು ಪ್ರಕರಣ?: ‘ಜ್ಞಾನಭಾರತಿ ಬಡಾವಣೆಯ ಅಭಿವೃದ್ಧಿಗಾಗಿ ಬಿಡಿಎ 1997ರಲ್ಲಿ ವಶಪಡಿಸಿಕೊಂಡ 22 ಗುಂಟೆ ಜಮೀನನ್ನು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ (2009ರ ಸೆ.25) ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ’ ಎಂದು ರವಿಕೃಷ್ಣಾರೆಡ್ಡಿ ಖಾಸಗಿ ದೂರು ದಾಖಲಿಸಿದ್ದರು.

ರಾಚೇನಹಳ್ಳಿ ಪ್ರಕರಣವೂ ವಜಾ

ಬೆಂಗಳೂರು: ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ರಾಚೇನಹಳ್ಳಿ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣವನ್ನೂ ಇದೇ ನ್ಯಾಯಾಲಯ ತಾಂತ್ರಿಕ ಕಾರಣದ ಆಧಾರದಲ್ಲಿ ಮಂಗಳವಾರ ವಿಲೇವಾರಿ ಮಾಡಿದೆ.

‘ಈಗಾಗಲೇ ಸಿಬಿಐ ನ್ಯಾಯಾಲಯ ನಮ್ಮನ್ನು ದೋಷಮುಕ್ತಗೊಳಿಸಿರುವುದರಿಂದ ಪ್ರಕರಣವನ್ನು ವಿಲೇವಾರಿ ಮಾಡಬೇಕು’ ಎಂದು ಯಡಿಯೂರಪ್ಪ ಕೋರಿದ್ದರು.

ಸಿಬಿಐ ನ್ಯಾಯಾಲಯ 2016ರ ಅಕ್ಟೋಬರ್‌ನಲ್ಲಿ ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಸೋಹನ್‌ ಕುಮಾರ್‌, ಸಜ್ಜನ್‌ ಜಿಂದಾಲ್‌ ಅಧ್ಯಕ್ಷರಾಗಿರುವ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಅಧಿಕಾರಿಗಳನ್ನು ಆರೋಪದಿಂದ ಬಿಡುಗಡೆ ಮಾಡಿತ್ತು.

ಮಾಜಿ ಸಚಿವ ಕೃಷ್ಣಯ್ಯ ಸೆಟ್ಟಿ, ಜೆಎಸ್‌ಡಬ್ಲ್ಯು ಅಧಿಕಾರಿಗಳಾದ ವಿನೋದ್‌ ನೋವಲ್‌ ಹಾಗೂ ವಿಕಾಸ್‌ ಶರ್ಮ ಒಳಗೊಂಡಂತೆ 12 ಜನರನ್ನು ಆರೋಪಿಗಳು ಎಂದು ಹೆಸರಿಸಲಾಗಿತ್ತು.

ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಅರ್ಜಿ ಅನುಸಾರ ಸುಪ್ರೀಂ ಕೋರ್ಟ್‌ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.