ADVERTISEMENT

ಅಭಿವೃದ್ಧಿಯ ಕುರಿತು ರೆಸಾರ್ಟ್‌ನಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಸಭೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 5:00 IST
Last Updated 29 ಅಕ್ಟೋಬರ್ 2019, 5:00 IST
ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು
ರೆಸಾರ್ಟ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು   

ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಗೆ ಅಧಿಕೃತವಾಗಿ ಭೇಟಿ ನೀಡಿದ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ ಅವರು ಅಭಿವೃದ್ಧಿಯ ಕುರಿತು ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಅಧಿಕಾರಿಗಳ ಸಭೆ ಸೋಮವಾರ ನಡೆಸುವ ಮೂಲಕ ಹೊಸ ಪದ್ಧತಿಗೆ ನಾಂದಿ ಹಾಡಿದರು.

ಸಭೆಯನ್ನು ವರದಿ ಮಾಡಲು ಮಾಧ್ಯಮದವರಿಗೆ ಪ್ರವೇಶ ಇರಲಿಲ್ಲ. ಈ ಕ್ರಮ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ಸಭೆಯ ಬಳಿಕ ಮಾತನಾಡಿದ ಸಿ.ಎನ್‌.ಅಶ್ವತ್ಥ ನಾರಾಯಣ ಈ ಹಿಂದಿನ ಮೂವರು ಪ್ರವಾಸೋದ್ಯಮ ಸಚಿವರಂತೆಯೇ, ನಂದಿ ಗಿರಿಧಾಮ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ ಎಂದು ಭರವಸೆ ನೀಡಿದರು.

ADVERTISEMENT

2.5 ಲಕ್ಷ ಲೀಟರ್ ನೀರನ್ನು ಬೆಟ್ಟದ ಮೇಲೆ ಶೇಖರಣೆ ಮಾಡಿ, ಪ್ರವಾಸಿಗರಿಗೆ ಅಗತ್ಯ ನೀರಿನ ಪೂರೈಕೆ ಮಾಡಲಾಗುವುದು. ಬೆಟ್ಟ ಸುತ್ತಲಿನ 15 ಸಾವಿರ ಎಕರೆ ಪ್ರದೇಶದ ಮೇಲೆ ಕಣ್ಣಿಡಲು, ಅರಣ್ಯಕ್ಕೆ ಬೀಳುವ ಬೆಂಕಿ ತಡೆಯಲು ಡ್ರೋಣ್‌ ಕ್ಯಾಮೆರಾ ಬಳಸಲಾಗುವುದು. ಸಾಮಾಜಿಕ ಅರಣ್ಯ ಇಲಾಖೆಯನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ನಂದಿಬೆಟ್ಟ ಹಲವು ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತದೆ. ಇದರ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ₹ 10 ಕೋಟಿ ಹಣ ನೀಡಲು ಸಿದ್ಧವಿದೆ. ಲೋಕೋಪಯೋಗಿ ಇಲಾಖೆ ₹ 6 ಕೋಟಿ ಮಂಜೂರು ಮಾಡಿ ಬಸ್‌ ನಿಲ್ದಾಣ, ವಾಹನ ನಿಲುಗಡೆ ಸೌಕರ್ಯ ಕಲ್ಪಿಸಲು ಮುಂದಾಗಿದೆ ಎಂದರು.

ಪರ್ಯಾಯ ಮಾರ್ಗದ ಚಿಂತನೆ: ನಂದಿಬೆಟ್ಟಕ್ಕೆ ರೋಪ್ ವೇ ಹಾಕುವ ಕುರಿತು ಡಿ.ಸಿ.ಎಂ. ಭರವಸೆ ನೀಡಿದರು. ಗಿರಿಧಾಮದಲ್ಲಿ ವಾಹನ ನಿಲುಗಡೆ ಮತ್ತು ವಾಹನ ದಟ್ಟನೆ ಸಮಸ್ಯೆ ಹೆಚ್ಚುತ್ತಿದೆ. ಈ ಎರಡೂ ಸಮಸ್ಯೆಗಳ ಪರಿಹಾರಕ್ಕೆ ಈಗಾಗಲೇ ಪರ್ಯಾಯ ಮಾರ್ಗಗಳ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.