ADVERTISEMENT

227 ಕಡೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’: ಸಚಿವ ಆರ್‌. ಅಶೋಕ 

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 9:13 IST
Last Updated 16 ಫೆಬ್ರುವರಿ 2021, 9:13 IST
   

ಬೆಂಗಳೂರು: ‘ಇದೇ 20ರಂದು 227 ಕಡೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಯಲಿದೆ’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಜಿಲ್ಲಾಧಿಕಾರಿಗಳ ಜೊತೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು, ‘ಇನ್ನು ಮುಂದೆ ಪ್ರತಿ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರ ಜೊತೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಕೂಡಾ ಇರುತ್ತಾರೆ’ ಎಂದರು.

‘ಕಂದಾಯ ಇಲಾಖೆ ಮಾತೃ ಇಲಾಖೆ. ಜನರ ಬಳಿಗೆ ಈ ಇಲಾಖೆ ಕೊಂಡೊಯ್ಯುವುದು ಈ ಕಾರ್ಯಕ್ರಮದ ಉದ್ದೇಶ. ಜಿಲ್ಲಾಧಿಕಾರಿಗಳು ಸಂದರ್ಶಕ ಅಧಿಕಾರಿಗಳಾಗಿ ಹಳ್ಳಿಗಳಿಗೆ ಹೋಗಬಾರದು. ಅಲ್ಲಿನ ಸಮಸ್ಯೆಗಳನ್ನು ಅರಿತು ಪರಿಹರಿಸಬೇಕು’ ಎಂದರು.

ADVERTISEMENT

‘ಬೆಳಿಗ್ಗೆ 10 ಗಂಟೆಯಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಅಂಗವಿಕಲರನ್ನು ಗುರುತಿಸಬೇಕು. ಕಣ್ಣಿಲ್ಲದವರು, ಪಿಂಚಣಿ ಪಡೆಯುವರನ್ನು ಭೇಟಿ ಮಾಡಬೇಕು. ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರಿ ಭೂಮಿ ಗುರುತಿಸಿ ಅಲ್ಲಿ ಗಿಡ ನೆಡಬೇಕು. ಯಾವ ಗ್ರಾಮಕ್ಕೆ‌ ಹೋಗುತ್ತಾರೊ ಅಲ್ಲಿನ ಶಾಲೆಯಲ್ಲಿ ಅಥವಾ ಹಾಸ್ಟೆಲ್‌ಗಳಲ್ಲೇ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮಲಗಬೇಕು. ಮಹಿಳಾ ಜಿಲ್ಲಾಧಿಕಾರಿಗಳ ಕೂಡಾ ಗ್ರಾಮ ವಾಸ್ತ್ಯವಕ್ಕೆ ಒಪ್ಪಿದ್ದಾರೆ’ ಎಂದೂ ಅಶೋಕ ಹೇಳಿದರು.

‘ಈ ವಾಸ್ತವ್ಯದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಜನರಿಂದ ಅಹವಾಲು ಸ್ವೀಕರಿಸಬೇಕು. ನಂತರ ಅಲ್ಲೇ ಅವರ ಸಮಸ್ಯೆ ಬಗೆಹರಿಸಬೇಕು. ಪ್ರವಾಹ ಸಂತ್ರಸ್ತರ ಸಮಸ್ಯೆಯನ್ನೂ ಬಗೆಹರಿಸಬೇಕು. ಕೆಲವು ಕಡೆ ಕಾಲುದಾರಿಗಳಿಲ್ಲ. ಅಂಥ ಕಡೆ ಕಾಲುದಾರಿಗಳನ್ನು ಮಾಡಬೇಕು. ಜನಪ್ರತಿನಿಧಿಗಳು ಕೂಡ ಒಂದು ಗಂಟೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು’ ಎಂದರು.

‘ಜಿಲ್ಲಾಧಿಕಾರಿಗಳು ವಾಸ್ತವ್ಯ ಹೂಡುವ ಹಳ್ಳಿಯ ಗ್ರಾಮದವರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬೇರೆ ಹಳ್ಳಿಯವರು ಭಾಗವಹಿಸುವಂತಿಲ್ಲ. ಖಾತೆ, ಪಹಣಿ, ಪಿಂಚಣಿ, ಅಂಗವಿಕಲರ ಸಮಸ್ಯೆಗಳಿಗೆ ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕು’ ಎಂದರು.

‘ನಾನು ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡ್ತೇನೆ. ಚಕ್ಕಡಿಯಲ್ಲಿ ತೆರಳಿ ದೇವರ ದರ್ಶನ ಮಾಡುತ್ತೇನೆ. ದಲಿತ ಕೇರಿಯ ಸಮಸ್ಯೆಗಳನ್ನು ಆಲಿಸುತ್ತೇನೆ. ನಂತರ ಹಳ್ಳಿಯ ಎಲ್ಲ ಮನೆಗಳಿಗೆ ಭೇಟಿ ನೀಡುತ್ತೇನೆ’ ಎಂದು ಅಶೋಕ ತಿಳಿಸಿದರು.

‘‍ಅದೇ ಹಳ್ಳಿಯಲ್ಲಿ ಆರೋಗ್ಯ ಶಿಬಿರ ನಡೆಯಲಿದೆ. ಅಲ್ಲಿನ ಸ್ಥಳೀಯ ಶಾಸಕರ ಜೊತೆ ಚರ್ಚಿಸಿ, ಸಮಸ್ಯೆಗಳನ್ನು ಸರಿಪಡಿಸುತ್ತೇನೆ. ರಾತ್ರಿ ಸ್ಥಳೀಯ ಕಲಾವಿದರ ಜೊತೆ ಚರ್ಚಿಸುತ್ತೇನೆ. ರಾತ್ರಿ ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲೇ ವಾಸ್ತವ್ಯ ಮಾಡ್ತೇನೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.