ADVERTISEMENT

ಉಪ ಸಭಾಪತಿ ಚುನಾವಣೆ ಇಂದು: ಕಣದಲ್ಲಿ ಪ್ರಾಣೇಶ್‌– ಕೆ.ಸಿ. ಕೊಂಡಯ್ಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 17:38 IST
Last Updated 28 ಜನವರಿ 2021, 17:38 IST
ಬಿಜೆಪಿಯ ಪ್ರಾಣೇಶ್‌ ಮತ್ತು ಕಾಂಗ್ರೆಸ್‌ನ ಕೆ.ಸಿ ಕೊಂಡಯ್ಯ
ಬಿಜೆಪಿಯ ಪ್ರಾಣೇಶ್‌ ಮತ್ತು ಕಾಂಗ್ರೆಸ್‌ನ ಕೆ.ಸಿ ಕೊಂಡಯ್ಯ    

ಬೆಂಗಳೂರು: ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಶುಕ್ರವಾರ (ಜ.29) ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಎಂ.ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್‌ನಿಂದ ಕೆ.ಸಿ. ಕೊಂಡಯ್ಯ ಗುರುವಾರ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಮುಖಂಡ ಎಸ್.ಎಲ್. ಧರ್ಮೇಗೌಡರ ನಿಧನದಿಂದ ಉಪ ಸಭಾಪತಿ ಸ್ಥಾನ ತೆರವಾಗಿದೆ.

ಜೆಡಿಎಸ್‌ ಬೆಂಬಲದಲ್ಲಿ ಪ್ರಾಣೇಶ್‌ ಆಯ್ಕೆಯಾಗುವುದು ಖಚಿತವಾಗಿದೆ. ಆ ಮೂಲಕ, ಬಿಜೆಪಿ– ಜೆಡಿಎಸ್ ನಡುವೆ ಮತ್ತೊಂದು
ಸುತ್ತಿನ ‘ಮೈತ್ರಿ’ ಆರಂಭಗೊಂಡಿದೆ. ಸಭಾಪತಿಯಾಗಿರುವ ಪ್ರತಾಪಚಂದ್ರ ಶೆಟ್ಟಿ ಅವರು ರಾಜೀನಾಮೆ
ಕೊಟ್ಟಲ್ಲಿ ಈ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನ ಬಸವರಾಜ ಹೊರಟ್ಟಿ ಅಣಿಯಾಗಿದ್ದಾರೆ. ಅವರಿಗೆ ಬೆಂಬಲ ನೀಡಲು ಬಿಜೆಪಿ ಕೂಡ ತಯಾರಾಗಿದೆ.

75 ಸದಸ್ಯ ಬಲದ ಪರಿಷತ್‌ನಲ್ಲಿ 31 ಸದಸ್ಯರನ್ನು ಹೊಂದಿರುವ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದೆ. ಜೆಡಿಎಸ್‌ 13 ಸದಸ್ಯರಿದ್ದಾರೆ.
ಕಾಂಗ್ರೆಸ್‌ನ 28, ಪಕ್ಷೇತರ ಒಬ್ಬರು ಇದ್ದಾರೆ. ಒಂದು ಸ್ಥಾನ ಖಾಲಿ ಇದೆ. ಪರಿಷತ್‌ನಲ್ಲಿ ಆಡಳಿತರೂಢ ಬಿಜೆಪಿಗೆ ಬಹುಮತ ಇಲ್ಲದೇ ಇರುವುದರಿಂದ ಮಸೂದೆಗಳು ಅಂಗೀಕಾರಗೊಳ್ಳಲು ಜೆಡಿಎಸ್ ಜೊತೆಗಿನ ಈ ಮೈತ್ರಿ ನೆರವಿಗೆ ಬರಲಿದೆ.

ADVERTISEMENT

ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ಪ್ರಾಣೇಶ್ ಎರಡು ನಾಮಪತ್ರಗಳನ್ನು ಸಲ್ಲಿಸಿದರು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜೀವರಾಜ್, ಆಯನೂರು ಮಂಜುನಾಥ್ ಸಮ್ಮುಖದಲ್ಲಿ ಒಮ್ಮೆ ನಾಮಪತ್ರ ಸಲ್ಲಿಸಿದರೆ, ಆ ನಂತರ ಕಂದಾಯ ಸಚಿವ ಆರ್‌. ಅಶೋಕ ಮತ್ತು ಜೆಡಿಎಸ್‌ನ ಬಸವರಾಜ ಹೊರಟ್ಟಿ ಸಮ್ಮುಖದಲ್ಲಿ ಎರಡನೇ ಪ್ರತಿ ಸಲ್ಲಿಸಿದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಜೊತೆ ತೆರಳಿ ಕೆ.ಸಿ. ಕೊಂಡಯ್ಯ ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.