ADVERTISEMENT

‘ಸ್ವಯಂಪ್ರೇರಿತ ಪ್ರಕರಣ ಬೇಡ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 20:15 IST
Last Updated 13 ಅಕ್ಟೋಬರ್ 2018, 20:15 IST

ಬೆಂಗಳೂರು: ಸಾಲ ಮರುಪಾವತಿಗಾಗಿ ಆರ್ಥಿಕ ದುರ್ಬಲ ವರ್ಗದವರ ಮೇಲೆ ದೌರ್ಜನ್ಯ ನಡೆಸುವ ಲೇವಾದೇವಿಗಾರರು, ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವ ನಿರ್ಧಾರವನ್ನು ಡಿಜಿಪಿ ನೀಲಮಣಿ ರಾಜು ಹಿಂಪಡೆದಿದ್ದಾರೆ.

ಸೆ.3ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, ‘ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ಅಶಕ್ತ ವರ್ಗದವರ ಋಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ‘ಕರ್ನಾಟಕ ಋಣಮುಕ್ತ ಮಸೂದೆ-2018’ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಮಸೂದೆ ಜಾರಿಗೂ ಮುನ್ನ ಸಾಲ ಮರಳಿಸುವಂತೆ ಒತ್ತಡ ಹೇರುವ ಲೇವಾದೇವಿಗಾರರು, ಹಣಕಾಸು ಸಂಸ್ಥೆಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಿ’ ಎಂದು ಡಿಜಿಪಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದರು.

ಅ.3ರಂದು ಇನ್ನೊಂದು ಸುತ್ತೋಲೆ ಹೊರಡಿಸಿ, ‘ಸಾಲ ಮರುಪಾವತಿಗಾಗಿ ರೈತರು ಹಾಗೂ ಸಾರ್ವಜನಿಕರಿಗೆ ಶೋಷಣೆ ನೀಡಲಾಗುತ್ತಿದೆ ಎಂದು ಸಹಕಾರ ಇಲಾಖೆಯ ನೋಂದಣಾಧಿಕಾರಿ/ಉಪ ನೋಂದಣಾಧಿಕಾರಿ ದೂರು ಕೊಟ್ಟರೆ ಮಾತ್ರ ಎಫ್‌ಐಆರ್ ಮಾಡಬೇಕು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬಾರದು’ ಎಂದು ಹೇಳಿದ್ದಾರೆ. ನಿರ್ಧಾರ ಹಿಂಪಡೆದಿರುವುದಕ್ಕೆ ಡಿಜಿಪಿ ಸೂಕ್ತ ಕಾರಣ ನೀಡಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.