
ಜಿ. ಪರಮೇಶ್ವರ
ಬೆಂಗಳೂರು: 'ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ಬೆನ್ನಲ್ಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ತುರ್ತು ಕ್ರಮ ಕೈಗೊಂಡಿದ್ದೇವೆ. ತನಿಖೆಯಾದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಜಾ ಕೂಡ ಆಗಬಹುದು' ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪರಮೇಶ್ವರ, ಮುಖ್ಯಮಂತ್ರಿ ಸಹ ಮಾತನಾಡಿದ್ದಾರೆ. ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಇಂತಹ ಘಟನೆಗಳನ್ನು ಇಲಾಖೆಯಲ್ಲಿ ನಡೆಯಲು ಬಿಡಬಾರದು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
'ಅವರು ಎಷ್ಟೇ ದೊಡ್ಡವರು, ಹಿರಿಯರೇ ಆಗಿರಲಿ. ಇಂತಹವುಗಳನ್ನು ಯಾವುದೇ ಕಾರಣಕ್ಕೂ ನಡೆಯಲು ಬಿಡಬಾರದು. ತುರ್ತು ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಮಾನತು ಮಾಡಿ ವಿಚಾರಣೆ ನಡೆಯಲಿದೆ' ಎಂದು ತಿಳಿಸಿದ್ದಾರೆ.
'ಇವೆಲ್ಲ ಸುಳ್ಳು ಅಂಥ ಡಿಜಿಪಿ ಹೇಳಿಕೆ ಕೊಟ್ಟಿದ್ದಾರೆ. ಹಾಗಿದ್ದರೆ ಆನಂತರ ನೋಡೋಣ. ಆದರೆ ಮೇಲ್ನೋಟಕ್ಕೆ ಕಾಣಿಸ್ತಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಮುಂದೆ ವಿಚಾರಣೆ ನಡೆಯಲಿದೆ. ಬೇರೆ ಬೇರೆ ಆಯಾಮಗಳನ್ನು ಪರಿಶೀಲಿಸಲಾಗುವುದು. ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹೇಳಿದ್ದಾರೆ.
ಡಿಜಿಪಿ ತಮ್ಮನ್ನು ಭೇಟಿ ಮಾಡಲು ಬಂದಿರುವ ವಿಚಾರದ ಕುರಿತು ಕೇಳಿದಾಗ, 'ನಾನು ಮಲಗಿದ್ದೆ. ಭೇಟಿ ಕೂಡಾ ಮಾಡುತ್ತಿರಲಿಲ್ಲ. ಇಂತಹ ಸನ್ನಿವೇಶದಲ್ಲಿ ನಾವು ಬಹಳ ಎಚ್ಚರದಿಂದ ಇರಬೇಕು' ಎಂದು ಹೇಳಿದ್ದಾರೆ.
'ಪೊಲೀಸ್ ಇಲಾಖೆ ಅಷ್ಟೇ ಅಲ್ಲದೆ ಯಾವುದೇ ಇಲಾಖೆಗೂ ಇಂತಹ ಘಟನೆಗಳಿಂದ ಕಳಂಕವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ತುರ್ತು ಕ್ರಮ ಕೈಗೊಂಡಿದ್ದೇವೆ' ಎಂದಿದ್ದಾರೆ.
'ಸದ್ಯ ಸಂತ್ರಸ್ತೆ ಯಾರು ಎಂಬುದರ ಬಗ್ಗೆ ಮಾಹಿತಿ ದೊರಕಿಲ್ಲ' ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.