ADVERTISEMENT

ಧರ್ಮಸ್ಥಳ ಪ್ರಕರಣ: ಸಾಕ್ಷಿ ದೂರುದಾರನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎಸ್‌ಐಟಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 11:14 IST
Last Updated 3 ಸೆಪ್ಟೆಂಬರ್ 2025, 11:14 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಸಾಕ್ಷಿ ದೂರುದಾರನನ್ನು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಹಾಜರು ಪಡಿಸಿತು.

ತಾನು ಹೂತುಹಾಕಿದ್ದ ಮೃತದೇಹವೊಂದನ್ನು ಅಗೆದು ತೆಗೆದಿರುವುದಾಗಿ ಹೇಳಿಕೊಂಡಿದ್ದ ಸಾಕ್ಷಿ ದೂರುದಾರ, ಈ ಕುರಿತು ತಲೆಬುರುಡೆಯೊಂದನ್ನು ಹಾಜರುಪಡಿಸಿದ್ದ. ಆದರೆ, ಅದನ್ನು ಹೊರತೆಗೆದದ್ದು ಎಲ್ಲಿಂದ ಎಂಬ ಬಗ್ಗೆ ವಿಚಾರಣೆ ವೇಳೆ ಎಸ್ಐಟಿಗೆ ಮಾಹಿತಿ ನೀಡಲು ಮೀನಾಮೇಷ ಎಣಿಸಿದ್ದ. 'ಆ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ' ಎಂದು ವಿಚಾರಣೆ ವೇಳೆ ತಿಳಿಸಿದ್ದ. ಈ ಬಗ್ಗೆ ಸುಳ್ಳು ಹೇಳಿದ್ದನ್ನು ಒಪ್ಪಿಕೊಂಡ ಆತನನ್ನು ಎಸ್ಐಟಿ ಅಧಿಕಾರಿಗಳು ಆ. 22ರಂದು ಬಂಧಿಸಿದ್ದರು. ಆತನನ್ನು ನ್ಯಾಯಾಲಯಕ್ಕೆ ಆ.23ರಂದು ಹಾಜರುಪಡಿಸಿದ್ದರು. ಈ ಕುರಿತ ಹೆಚ್ಚಿನ ವಿಚಾರಣೆ ಸಲುವಾಗಿ ನ್ಯಾಯಾಲಯವು ಸಾಕ್ಷಿ ದೂರುದಾರನ್ನು ಸೆ.3ರವರೆಗೆ ಎಸ್‌ಐಟಿ ವಶಕ್ಕೆ ಒಪ್ಪಿಸಿತ್ತು.

ಸಾಕ್ಷಿ ದೂರುದಾರ ತಂದೊಪ್ಪಿಸಿರುವ ತಲೆ ಬುರುಡೆ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಆತನಿಂದ ಹೇಳಿಕೆ ದಾಖಲಿಸಿಕೊಂಡಿದ್ದರು. ದೂರು ದಾಖಲಿಸುವ ಮುನ್ನ ಆತ ಎಲ್ಲೆಲ್ಲ ಆಶ್ರಯ ಪಡೆದಿದ್ದ ಎಂಬ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದರು. ಸಾಕ್ಷಿ ದೂರುದಾರ ಉಳಿದುಕೊಂಡಿದ್ದ ಉಜಿರೆ ಬಳಿಯ ಮಹೇಶ್‌ ಶೆಟ್ಟಿ ತಿಮರೋಡಿ ಅವರ ಮನೆ, ಬೆಂಗಳೂರಿನ ಪೀಣ್ಯದಲ್ಲಿ ಜಯಂತ್ ಟಿ. ಅವರ ಕುಟುಂಬ ವಾಸವಿದ್ದ ಬಾಡಿಗೆ ಮನೆ, ಬೆಂಗಳೂರಿನ ವಿದ್ಯಾರಣ್ಯಪುರದ ಸರ್ವಿಸ್ ಅಪಾರ್ಟ್‌ಮೆಂಟ್‌, ಉಜಿರೆ–ಚಾರ್ಮಾಡಿ ರಸ್ತೆ ಸಮೀಪದ ರೆಸಾರ್ಟ್‌ ಸೇರಿದಂತೆ ಅನೇಕ ಸ್ಥಳಗಳಿಗೆ ಎಸ್‌ಐಟಿ ಅಧಿಕಾರಿಗಳು ಆತನನ್ನು ಕರದೊಯ್ದು ಮಹಜರು ಮಾಡಿದ್ದರು.

ADVERTISEMENT

ಹೆಚ್ಚಿನ ವಿಚಾರಣೆ ಸಲುವಾಗಿ ಸಾಕ್ಷಿ ದೂರುದಾರನನ್ನು ಮತ್ತೆ ತಮ್ಮ ವಶಕ್ಕೆ ಒಪ್ಪಿಸುವಂತೆ ಎಸ್‌ಐಟಿ ಪರ ವಕೀಲರು ನ್ಯಾಯಾಲಯದಲ್ಲಿಲ್ಲಿ ಬೇಡಿಕೆ ಸಲ್ಲಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.