ADVERTISEMENT

ಧರ್ಮಸ್ಥಳ ಕೇಸ್ | ಸೌಜನ್ಯ ಮಾವನ ಕರೆದೊಯ್ದು ಸ್ಥಳ ಮಹಜರು; ಶವದ ಅವಶೇಷ ಪತ್ತೆ?

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 23:32 IST
Last Updated 7 ಸೆಪ್ಟೆಂಬರ್ 2025, 23:32 IST
<div class="paragraphs"><p>ಸಂಗ್ರಹ ಚಿತ್ರ</p></div>

ಸಂಗ್ರಹ ಚಿತ್ರ

   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್ಐಟಿ) ಪಾಂಗಾಳದ ವಿಠಲ ಗೌಡ ಅವರನ್ನು ನೇತ್ರಾವತಿ ಸ್ನಾನಘಟ್ಟ ಪಕ್ಕದ ಕಾಡಿನೊಳಗೆ ಕರೆದೊಯ್ದು ಶನಿವಾರ ಮಹಜರು ನಡೆಸಿದ ವೇಳೆ ಮೃತದೇಹದ ಕೆಲ ಅವಶೇಷಗಳು ನೆಲದ ಮೇಲೆಯೇ ಪತ್ತೆಯಾಗಿವೆ ಎಂದು ಗೊತ್ತಾಗಿದೆ.

ಸಾಕ್ಷಿ ದೂರುದಾರ ಎಸ್‌ಐಟಿಗೆ ಒಪ್ಪಿಸಿದ್ದ ತಲೆ ಬುರುಡೆ ಹೊರತೆಗೆದ ಜಾಗದ ಮಹಜರಿನ ಸಲುವಾಗಿ ವಿಠಲ ಗೌಡ (ಕೊಲೆಯಾದ ಸೌಜನ್ಯಾ ಅವರ ಮಾವ) ಅವರನ್ನು ಬಂಗ್ಲಗುಡ್ಡೆಯ ಕಾಡಿನೊಳಗೆ ಶನಿವಾರ ಕರೆದೊಯ್ದ ಅಧಿಕಾರಿಗಳ ತಂಡ, ಮರಳುವಾಗ ಕತ್ತಲಾವರಿಸಿತ್ತು. ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರು ಇದ್ದರು. ತಂಡದ ಅಧಿಕಾರಿಗಳು ಮೃತದೇಹದ ಅವಶೇಷಗಳನ್ನು ಬಕೆಟ್‌ನಲ್ಲಿ ತುಂಬಿ ಒಯ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಮತ್ತೆ ಶೋಧ?:

ಮಹಜರು ನಡೆದ ವೇಳೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್‌ ಅವರಾಗಲಿ, ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರಾಗಲೀ ಇರಲಿಲ್ಲ. ಮಹಜರಿನ ವೇಳೆ ನೆಲ
ವನ್ನೂ ಅಗೆದಿರಲಿಲ್ಲ. ಹಾಗಾಗಿ ಅಲ್ಲಿ ಎಸ್‌ಐಟಿ ಮತ್ತೆ ಶೋಧಕಾರ್ಯ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಹಜರು ಬಳಿಕ ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ಕಚೇರಿಗೆ ಕರೆದೊಯ್ದಿದ್ದು, ಅಲ್ಲೇ ಇದ್ದಾರೆ. ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ್ ಟಿ., ಗಿರೀಶ್‌ ಮಟ್ಟಣ್ಣವರ್‌ ಅವರನ್ನು ಭಾನುವಾರ ಮತ್ತೆ ಬೆಳ್ತಂಗಡಿಯ ಕಚೇರಿಗೆ ಅಧಿಕಾರಿಗಳು ಕರೆಸಿಕೊಂಡಿದ್ದಾರೆ. ಇಬ್ಬರು ಶನಿವಾರವೂ ಎಸ್‌ಐಟಿ ಕಚೇರಿಗೆ ತೆರಳಿ ಹೇಳಿಕೆ ನೀಡಿದ್ದರು.

ಅಗೆದಿದ್ದ ಕಡೆ ಪೊಲೀಸ್‌ ಕಾವಲು

ಸಾಕ್ಷಿ ದೂರುದಾರ, ಶವಗಳನ್ನು ಹೂತಿರುವುದಾಗಿ ತೋರಿಸಿದ್ದ ಎಲ್ಲ ಜಾಗಗಳಲ್ಲಿ ಶೋಧ ಪೂರ್ಣಗೊಂಡ ಬಳಿಕ ನೇತ್ರಾವತಿ ಸ್ನಾನ ಘಟ್ಟದ ಆಸುಪಾಸಿನ ಪ್ರದೇಶದಲ್ಲಿ ಪೊಲೀಸ್ ಕಾವಲು ಹಿಂಪಡೆಯಲಾಗಿತ್ತು. 

ಶನಿವಾರ ರಾತ್ರಿಯಿಂದ ನೇತ್ರಾವತಿ ಸೇತುವೆ, ಸ್ನಾನಘಟ್ಟ ಹಾಗೂ ಪಕ್ಕದ ಕಾಡಿನ ಪರಿಸರದಲ್ಲಿ ಕಾವಲಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ರಾತ್ರಿ ವೇಳೆಯೂ ಈ ಪರಿಸರದಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.

ಸಾಕ್ಷಿ ದೂರುದಾರನಿಗೆ ಪ್ರತ್ಯೇಕ ಸೆಲ್‌

ಶಿವಮೊಗ್ಗ: ಧರ್ಮಸ್ಥಳ ಬೆಳವಣಿಗೆ ಪ್ರಕರಣದ ಸಾಕ್ಷಿ ದೂರುದಾರನನ್ನು ಇಲ್ಲಿನ ಜಿಲ್ಲಾ ಕೇಂದ್ರ ಕಾರಾಗೃಹದ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗಿದೆ. 

ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ ದಕ್ಷಿಣ ಕನ್ನಡ ಪೊಲೀಸರ ತಂಡ ಶನಿವಾರ ಮಧ್ಯರಾತ್ರಿ ಬಿಗಿ ಭದ್ರತೆಯಲ್ಲಿ ಇಲ್ಲಿಗೆ ಕರೆತಂದರು. 

ಜೈಲಿನ ಅಧಿಕಾರಿಗಳು ನಿಯಮಾವಳಿಯಂತೆ ಆರೋಗ್ಯ ತಪಾಸಣೆ ಸೇರಿದಂತೆ ಇತರೆ ಪ್ರಕ್ರಿಯೆ ಪೂರ್ಣಗೊಳಿಸಿ ವಿಚಾರಣಾಧೀನ ಬಂಧಿ ಸಂಖ್ಯೆ 1104 ನೀಡಿ, ಸೆಲ್‌ನಲ್ಲಿ ಇರಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.