ADVERTISEMENT

ಧರ್ಮಸ್ಥಳ ಪ್ರಕರಣ: 13ನೇ ಜಾಗದಲ್ಲಿ ಅಗೆಯುವ ಕಾರ್ಯ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 9:11 IST
Last Updated 13 ಆಗಸ್ಟ್ 2025, 9:11 IST
   

ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ಸಂಬಂಧ ಸಾಕ್ಷಿ ದೂರುದಾರ ತೋರಿಸಿದ್ದ 13 ನೇ ಜಾಗದಲ್ಲಿ ಯಂತ್ರದ ಮೂಲಕ ನೆಲವನ್ನು ಅಗೆಯುವ ಕಾರ್ಯ ಬುಧವಾರ ಮುಂದುವರಿದಿದೆ.

ಈ ಜಾಗದಲ್ಲಿ ವಿದ್ಯುತ್ ಮಾರ್ಗ ಹಾಗೂ ಮೂರು ವಿದ್ಯುತ್ ಕಂಬಗಳಿವೆ. ಈ ಜಾಗದ ಕೆಲವೇ ಮೀಟರ್ ದೂರದಲ್ಲಿ ಕಿರು ಅಣೆಕಟ್ಟೆಯೂ ಇದೆ. ಹಾಗಾಗಿ ವಿಶೇಷ ತನಿಖಾ ತಂಡವು (ಎಸ್ಐಟಿ) ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ಸಾಧನವನ್ನು ಬಳಸಿ ಶೋಧ ನಡೆಸಿ ನೆಲದಡಿಯ ಸಂರಚನೆಯನ್ನು ತಿಳಿದುಕೊಂಡ ಬಳಿಕವಷ್ಟೇ ಇಲ್ಲಿ ಮಂಗಳವಾರ ನೆಲವನ್ನು ಅಗೆಯುವ ಕಾರ್ಯವನ್ನು ಆರಂಭಿಸಿತ್ತು. ಸಾಕ್ಷಿ ದೂರುದಾರ ತೋರಿಸಿದ್ದ 13 ನೇ ಜಾಗದ ಒಂದು ಭಾಗವನ್ನು ಮಂಗಳವಾರ ಅಗೆಯಲಾಗಿತ್ತು. ಕತ್ತಲಾವರಿಸಿದ್ದರಿಂದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆ ಜಾಗದ ಇನ್ನೊಂದು ಭಾಗವನ್ನು ಬುಧವಾರ ಅಗೆಯಲಾಗುತ್ತಿದೆ. ನೆಲ ಅಗೆಯುವ ಒಂದು ದೊಡ್ಡ ಯಂತ್ರ ಹಾಗೂ ಇನ್ನೊಂದು ಸಣ್ಣ ಯಂತ್ರ ಮಳೆಯ ನಡುವೆಯೇ ಗುಂಡಿ ಅಗೆಯುವ ಕಾರ್ಯದಲ್ಲಿ ತೊಡಗಿವೆ.

ಸಾಕ್ಷಿ ದೂರುದಾರ ಸ್ಥಳದಲ್ಲೇ ಇದ್ದು ಎಲ್ಲೆಲ್ಲಿ ಅಗೆಯಬೇಕು ಎಂದು ತೋರಿಸುತ್ತಿದ್ದಾರೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ, ವಿಧಿ ವಿಜ್ಞಾನ ತಜ್ಞರು ಸ್ಥಳದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.